ಮುಂಬೈ: BMW ಕಾರು ಅಪಘಾತದ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾಗೆ ಮುಂಬೈ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 23 ವರ್ಷದ ಮಿಹಿರ್ ಷಾ, 45 ವರ್ಷದ ಮಹಿಳೆಯ ಜೀವ ತೆಗೆದ ಆರೋಪಿಯಾಗಿದ್ದು, ಬಂಧಿಸಿದ ನಂತರ ಪೊಲೀಸ್ ವಿಚಾರಣೆಯಲ್ಲಿ ತಾನು ಆಗಾಗ್ಗೆ ಮದ್ಯಪಾನ ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸರನ್ನು ದಾರಿತಪ್ಪಿಸಲು ವಿರಾರ್‌ನ ಕ್ಷೌರಿಕನ ಅಂಗಡಿಯಲ್ಲಿ ಆತ ಗಡ್ಡ ಬೋಳಿಸಿಕೊಂಡು, ಕೂದಲು ಕಟ್ ಮಾಡಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮಿಹಿರ್ ನನ್ನು ಇಂದು ಮುಖ್ಯ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಪೊಲೀಸರು ಆತನ ಕಸ್ಟಡಿ ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು. ಇದಕ್ಕೆ ಮಿಹಿರ್ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜುಲೈ 6 ರಂದು, ಮಿಹಿರ್ ಷಾ ಜುಹುದಲ್ಲಿನ ಬಾರ್‌ನಿಂದ ವಾಪಸ್ಸಾಗುತ್ತಿದ್ದಾಗ ಆತ ಚಲಾಯಿಸುತ್ತಿದ್ದ ಐಷಾರಾಮಿ ಬಿಎಂಡಬ್ಲ್ಯು ಕಾರು ಬೆಳಿಗ್ಗೆ 5:30 ರ ಸುಮಾರಿನಲ್ಲಿ ದ್ವಿಚಕ್ರ ವಾಹನದಲ್ಲಿದ್ದ ದಂಪತಿಗೆ ಡಿಕ್ಕಿ ಹೊಡೆದಿತ್ತು. ಎರಡು ಮಕ್ಕಳ ತಾಯಿ ಕಾವೇರಿ ನಖ್ವಾ (45) ಮೃತಪಟ್ಟಿದ್ದರು. ಪತಿ ಪ್ರದೀಪ್ ನಖ್ವಾ ಅವರೊಂದಿಗೆ ಮೀನು ಖರೀದಿಸಲು ತೆರಳಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಪ್ರದೀಪ್ ನಖ್ವಾ ಅವರಿಗೂ ಗಾಯಗಳಾಗಿತ್ತು. ಕಾರು ಡಿಕ್ಕಿ ಹೊಡೆದ ನಂತರ ಕಾವೇರಿ ನಖ್ವಾ ಅವರನ್ನು 1.5 ಕಿ.ಮೀ ಎಳೆದೊಯ್ದಿರುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಿಂದ ತಿಳಿದುಬಂದಿದೆ.