ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ರಾಷ್ಟ್ರ ರಾಜಧಾನಿಗೆ ಎರಡನೇ ಬಾರಿ ಭೇಟಿ ನೀಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಮಂಗಳವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಮೂಲಗಳ ಪ್ರಕಾರ, ಮುಂಬರುವ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚಿನ ಹಣ ಹಂಚಿಕೆ ಮಾಡುವಂತೆ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅತಿದೊಡ್ಡ ಮಿತ್ರ ಪಕ್ಷವಾದ ತೆಲುಗು ದೇಶಂ ಪಕ್ಷದ(ಟಿಡಿಪಿ) ಮುಖ್ಯಸ್ಥ ನಾಯ್ಡು ಅವರು ತಮ್ಮ ಎರಡು ದಿನಗಳ ಭೇಟಿಯಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಇತರ ಸಚಿವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಟಿಡಿಪಿಯ ಸಂಸದೀಯ ನಾಯಕ ಕೃಷ್ಣ ದೇವರಾಯಲು ಅವರು, ನಮ್ಮ ಬೇಡಿಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತದೆ ಎಂಬ ಭರವಸೆ ಇದೆ.
"ಹೆಚ್ಚಾಗಿ ಬಜೆಟ್ ಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುತ್ತಿದೆ. ನಾವು ಎನ್‌ಡಿಎ ಭಾಗವಾಗಿದ್ದೇವೆ ಮತ್ತು ಅವರು ಬಜೆಟ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ನಮ್ಮನ್ನು ಆಹ್ವಾನಿಸಿದ್ದಾರೆ ಎಂದರು.
ಸಿಎಂ ನಾಯ್ಡು ಅವರ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಭರವಸೆ ನಮಗಿದೆ ಎಂದು ದೇವರಾಯಲು ಹೇಳಿದ್ದಾರೆ.
ನಾಯ್ಡು ಅವರ ಬೇಡಿಕೆಗಳಲ್ಲಿ ಪ್ರಮುಖವಾದವುಗಳೆಂದರೆ ಪೋಲವರಂ ನೀರಾವರಿ ಯೋಜನೆಗೆ ಹಣ, ಹಿಂದುಳಿದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಮತ್ತು ಹೊಸ ರಾಜಧಾನಿ ಅಮರಾವತಿಯ ಅಭಿವೃದ್ಧಿಗೆ ನೆರವು ಕೋರಿದ್ದಾರೆ ಎನ್ನಲಾಗಿದೆ.