ಪಾಲಕ್ಕಾಡ್: ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ನದಿಯ ಮಧ್ಯದ ಬಂಡೆಯೊಂದರಲ್ಲಿ ಸಿಲುಕಿದ್ದ ವೃದ್ಧ ಮಹಿಳೆ ಸೇರಿದಂತೆ ನಾಲ್ವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ದಿಟ್ಟ ಕಾರ್ಯಾಚರಣೆಯಲ್ಲಿ ಮಂಗಳವಾರ ರಕ್ಷಿಸಿದ್ದಾರೆ.
ಚಿತ್ತೂರು ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂಲತಾರಾ ನಿಯಂತ್ರಕ ಪ್ರದೇಶದಿಂದ ನೀರು ಬಿಡುಗಡೆ ಮಾಡಿದ್ದರಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಕೆಚ್ಚೆದೆಯ ಕಾರ್ಯಾಚರಣೆ ನಡೆಸಿ, ಎಚ್ಚರಿಕೆಯಿಂದ ಬಂಡೆಯನ್ನು ತಲುಪಿದ್ದು, ಹಗ್ಗದ ಮೂಲಕ ಅದನ್ನು ನದಿ ದಡಕ್ಕೆ ಸಂಪರ್ಕಿಸಿದ್ದಾರೆ. ಲೈಫ್ ಜಾಕೆಟ್‌ಗಳನ್ನು ಒದಗಿಸಲಾದ ನಾಲ್ವರು ವ್ಯಕ್ತಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಹಗ್ಗಕ್ಕೆ ಜೋಡಿಸಲಾದ ಗಾಳಿ ತುಂಬಿದ ರಕ್ಷಣಾ ಟ್ಯೂಬ್‌ಗಳ ಮೇಲೆ ದಡಕ್ಕೆ ತರಲಾಯಿತು ಎಂದು ಟಿವಿ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ ದೃಶ್ಯಗಳು ತೋರಿಸಿವೆ. ಕೇರಳದ ವಿದ್ಯುತ್ ಸಚಿವ ಕೃಷ್ಣನ್‌ಕುಟ್ಟಿ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿಯ ದಿಟ್ಟ ಕಾರ್ಯಾಚರಣೆಗೆ ಸಚಿವ ಕೃಷ್ಣನಕುಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. ಪಾಲಕ್ಕಾಡ್‌ನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, 11 ಸೆಂಟಿಮೀಟರ್‌ನಿಂದ 20 ಸೆಂಮೀ ವರೆಗೆ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೆ, ಕೆಲಸ ಅರಸಿ ಪಾಲಕ್ಕಾಡ್‌ಗೆ ಬಂದಿದ್ದ ಕರ್ನಾಟಕದ ಮೈಸೂರು ನಿವಾಸಿಗಳಾದ ನಾಲ್ವರು ಎಚ್ಚರಿಕೆ ಅರಿಯದೆ ನದಿಗೆ ಇಳಿದಿದ್ದು, ಏಕಾಏಕಿ ನೀರಿನ ಮಟ್ಟ ಹೆಚ್ಚಾದಾಗ ಸಂಕಷ್ಟಕ್ಕೆ ಸಿಲುಕಿದ್ದರು.