ಅನಂತನಾಗ್: 1990ರಲ್ಲಿ ಉಗ್ರಗಾಮಿಗಳ ದಾಳಿಗೆ ತುತ್ತಾಗಿ ಹಾಳಾಗಿದ್ದ ಪುರಾತನ ಕಾಲದ Uma Bhagwati ದೇವಸ್ಥಾನ ಬರೊಬ್ಬರಿ 34 ವರ್ಷಗಳ ಬಳಿಕ ಭಕ್ತರ ಸೇವೆಗೆ ಮತ್ತೆ ತೆರೆದುಕೊಂಡಿದೆ.
ಹೌದು.. ಅನಂತನಾಗ್‌ನಲ್ಲಿರುವ ಉಮಾ ಭಗವತಿ ದೇವಾಲಯ ಹಿಂದೂಗಳ ಪಾಲಿಗೆ ಬಹಳ ವಿಶೇಷವಾದ ದೇವಸ್ಥಾನವಾಗಿದ್ದು, ಕಳೆದ 34 ವರ್ಷಗಳ ಕಾಲ ಮುಚ್ಚಲ್ಪಟ್ಟ ಈ ಪವಿತ್ರ ದೇವಾಲಯವು ಕೊನೆಗೂ ಭಕ್ತರಿಗೆ ತನ್ನ ಬಾಗಿಲುಗಳನ್ನು ತೆರೆದಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶಾಂಗಾಸ್ ಗ್ರಾಮದಲ್ಲಿ ರಾಗ್ನ್ಯಾ ದೇವಿ ದೇವಸ್ಥಾನ ಎಂದೂ ಕರೆಯಲ್ಪಡುವ ಉಮಾ ಭಗವತಿ ದೇವಸ್ಥಾನವಿದೆ. ಇದು ಪಾರ್ವತಿ ದೇವಿಯ ಅವತಾರವಾದ ಉಮಾ ದೇವಿಗೆ ಸಮರ್ಪಿತವಾದ ದೇವಸ್ಥಾನವಾಗಿದ್ದು, ಈ ದೇವಾಲಯವು 500 ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ.
ಇಂತಹ ಇತಿಹಾಸ ಪ್ರಸಿದ್ಧ ದೇಗುಲವನ್ನು ಬರೊಬ್ಬರಿ 3 ದಶಕಗಳ ನಂತರ ಈ ದೇವಾಲಯವು ಪುನರಾರಂಭಗೊಂಡಿದ್ದು, ಸ್ಥಳೀಯರು ಮತ್ತು ಭಕ್ತರಲ್ಲಿ ಅಪಾರ ಸಂತೋಷ ಮತ್ತು ಉತ್ಸಾಹವನ್ನು ತಂದಿದೆ.
ಉಗ್ರಗಾಮಿಗಳ ದಾಳಿಗೆ ತುತ್ತಾಗಿ ಹಾಳಾಗಿದ್ದ ಪುರಾತನ ದೇಗುಲ
1990ರಲ್ಲಿ ಈ ಪ್ರದೇಶದಲ್ಲಿ ಉಗ್ರಗಾಮಿಗಳ ಆಕ್ರಮಣದಿಂದಾಗಿ ದೇವಾಲಯವನ್ನು ಮುಚ್ಚಲಾಯಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಣಿವೆಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಅಧಿಕಾರಿಗಳು ಈ ಪವಿತ್ರ ದೇಗುಲವನ್ನು ಪುನಃ ತೆರೆಯಲು ನಿರ್ಧರಿಸಿದರು. ಇದೀಗ ದೇಗುಲದ ಜೀರ್ಣೋದ್ಧಾರದ ಬಳಿಕ ಮತ್ತೆ ದೇಗುಲವನ್ನು ಭಕ್ತರಿಗಾಗಿ ತೆರೆಯಲಾಗಿದ್ದು, ಇದು ಭಕ್ತರ ಸಂತೋಷಕ್ಕೆ ಕಾರಣವಾಗಿದೆ. ದೇವಾಲಯದ ಪುನರಾರಂಭ ಸಮಾರಂಭದಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ ಭಾಗವಹಿಸಿದ್ದರು.
ದೇಗುಲದ ಐತಿಹ್ಯ
ಇಲ್ಲಿನ ಸ್ಥಳೀಯ ಕಥೆಗಳ ಅನ್ವಯ ಈ ಉಮಾ ಭಗವತಿ ದೇವಸ್ಥಾನದ ಮಹತ್ವವು ಪ್ರಾಚೀನ ಕಾಲದಿಂದಲೂ ಗುರುತಿಸಿಕೊಂಡಿದೆ. ಶಿವನು ತನ್ನ ಪತ್ನಿ ಸತಿ ದೇವಿಯು ತನ್ನನ್ನು ತಾನೇ ಬೆಂಕಿ ಹಚ್ಚಿಕೊಂಡ ನಂತರ ಆಕೆಯ ಬಲಗೈ ಇದೇ ಉಮಾ ಭಗವತಿ ದೇವಾಲಯವಿರುವ ಈ ಸ್ಥಳದಲ್ಲಿಯೇ ಬಿದ್ದಿತು.
ಪಾರ್ವತಿ ದೇವಿಯು ತಮ್ಮ ವಿವಾಹದ ಮೊದಲು ಶಿವನ ಆಶೀರ್ವಾದವನ್ನು ಪಡೆಯಲು ಇಲ್ಲಿ ಧ್ಯಾನ ಮಾಡಿದ್ದಳು ಎಂದು ನಂಬಲಾಗಿದೆ. ಈ ದೇವಾಲಯವು ಬ್ರಹ್ಮ ಕುಂಡ, ವಿಷ್ಣು ಕುಂಡ, ರುದ್ರ ಕುಂಡ, ಮತ್ತು ಶಿವಶಕ್ತಿ ಕುಂಡ ಸೇರಿದಂತೆ 5 ಬುಗ್ಗೆಗಳ ನಡುವೆ ಇದೆ ಎನ್ನಲಾಗುತ್ತದೆ.