ಲಖನೌ: ಉತ್ತರ ಪ್ರದೇಶ ರಾಜ್ಯಾದ್ಯಂತ ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿ ಬರುವ ಎಲ್ಲಾ ಉಪಹಾರ ಗೃಹಗಳು ನಾಮಫಲಕ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಮಾರ್ಗಸೂಚಿ ಹೊರಡಿಸಿದ ಮಾರನೇ ದಿನವೇ, ಗಂಗಾಜಲ ಸಂಗ್ರಹಿಸಲು ಹರಿದ್ವಾರಕ್ಕೆ ತೆರಳುತ್ತಿದ್ದ ಕನ್ವರಿಯಾ (ಶಿವಭಕ್ತರು) ಗುಂಪೊಂದು ಶುಕ್ರವಾರ ಮುಜಾಫರ್ ನಗರದಲ್ಲಿ ಕರಿಯಲ್ಲಿ ಈರುಳ್ಳಿ ಕಂಡುಬಂದ ನಂತರ ಉಪಹಾರ ಗೃಹದ ಮೇಲೆ ದಾಳಿ ನಡೆಸಿದ್ದಾರೆ.
ನೆರೆಯ ಹರಿಯಾಣದ ಕನ್ವರಿಯಾಗಳು ಮುಜಾಫರ್‌ನಗರ ಜಿಲ್ಲೆಯ ದೆಹಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತೌ ಹುಕ್ಕೇವಾಲಾ ಹರ್ಯಾಣಿ ಟೂರಿಸ್ಟ್ ಡಾಬಾದಲ್ಲಿ ಊಟಕ್ಕಾಗಿ ಇಳಿದಿದ್ದಾರೆ. ಊಟ ಮಾಡುವಾಗ ಅವರಿಗೆ ಬಡಿಸಿದ ಕರಿಯಲ್ಲಿ ಈರುಳ್ಳಿ ಚೂರುಗಳು ಕಂಡುಬಂದಿವೆ. ಇದರಿಂದ ಆಕ್ರೋಶಗೊಂಡ ಕನ್ವರಿಯಾಗಳು ಡಾಬಾ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಲ್ಲಿದ್ದ ಪೀಠೋಪಕರಣಗಳು ಮತ್ತು ರೆಫ್ರಿಜರೇಟರ್ ಧ್ವಂಸಗೊಳಿಸಿದ್ದಾರೆ. ಅವರ ಗುರಿ ಉಪಾಹಾರ ಗೃಹದ ಬಾಣಸಿಗ ಆಗಿದ್ದ. ಆದರೆ ಆತ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದೆ.
ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಆಕ್ರೋಶಗೊಂಡ ಕನ್ವರಿಯಾರನ್ನು ಸಮಾಧಾನ ಪಡಿಸಬೇಕಾಯಿತು. ಘಟನೆಯ ಕುರಿತು ಪ್ರತಿಕ್ರಿಯಿಸಿದ ಚಾಪರ್ ಪೊಲೀಸ್ ಠಾಣೆ ಎಸ್‌ಎಚ್‌ಒ ರೋಜೆಂಟ್ ತ್ಯಾಗಿ, ಶಿವನ ಭಕ್ತರು ಕನ್ವರ್ ಯಾತ್ರೆಯಲ್ಲಿ ವಿಶೇಷವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಸರಳ ಸಾತ್ವಿಕ್ ಆಹಾರವನ್ನು ಸೇವಿಸುವುದರಿಂದ, ಕರಿಯಲ್ಲಿ ಈರುಳ್ಳಿ ಚೂರುಗಳನ್ನು ಕಂಡು ಆಕ್ರೋಶಗೊಂಡರು. ಈರುಳ್ಳಿಯನ್ನು ಸಹ ಕನ್ವರಿಯಾದವರು ಸೇವಿಸುವುದಿಲ್ಲ ಎಂಬ ಅರಿವಿಲ್ಲದ ಕಾರಣ ಗೊಂದಲದಿಂದ ಹೀಗಾಯಿತು ಎಂದು ಡಾಬಾ ಮಾಲೀಕ ಪ್ರಮೋದ್ ಕುಮಾರ್ ಹೇಳಿದ್ದಾರೆ.
ಈರುಳ್ಳಿ ಅಥವಾ ಬೆಳ್ಳುಳ್ಳಿ ಇಲ್ಲದ ಊಟ ನೀಡುವಂತೆ ಕೇಳಿದ್ದರೂ ಈರುಳ್ಳಿ ಚೂರುಗಳು ಇರುವ ಕರಿ ನೀಡಲಾಗಿತ್ತು. ಕನ್ವರಿಯಾದವರು ತಮ್ಮ ಗ್ರಾಮದ ದೇವಸ್ಥಾನದಲ್ಲಿ ಶಿವನಿಗೆ ಪವಿತ್ರ ನೀರನ್ನು ಅರ್ಪಿಸುವವರೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸುವುದನ್ನು ತಪ್ಪಿಸಿ ಎಂದು ಕನ್ವರಿಯಾಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಭಕ್ತಾದಿಗಳು ರಸ್ತೆಯಲ್ಲಿ ನಡೆಯುವಾಗ ಅಥವಾ ಅನ್ನಸಂತರ್ಪಣೆ ಮಾಡುವಾಗ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಉಪ ಎಸ್ಪಿ (ಸದರ್) ರಾಜುಕುಮಾರ್ ಸಾಬ್ ಹೇಳಿದರು.