ಮುಂಬೈ: ದಕ್ಷಿಣ ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ವಸತಿ ಕಟ್ಟಡದ ಬಾಲ್ಕನಿಯ ಒಂದು ಭಾಗವು ಶನಿವಾರ ಕುಸಿದುಬಿದ್ದಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ರುಬಿನ್ನಿಸಾ ಮಂಜಿಲ್ ಕಟ್ಟಡವು ಗ್ರಾಂಟ್ ರೋಡ್ ರೈಲು ನಿಲ್ದಾಣದ ಬಳಿಯ ಸ್ಲೀಟರ್ ರಸ್ತೆಯಲ್ಲಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಾಲ್ಕನಿಯ ಒಂದು ಭಾಗ ಕುಸಿದುಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಇತರ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಇದು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರದ(ಎಂಎಚ್‌ಎಡಿಎ) ಹಳೆಯ ಕಟ್ಟಡವಾಗಿದ್ದು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಇದನ್ನು ಅಪಾಯಕಾರಿ ಕಟ್ಟಡ ಎಂದು ಘೋಷಿಸಿದೆ. ಈ ಹಿಂದೆ ಮನೆ ಖಾಲಿ ಮಾಡುವಂತೆ ನೋಟಿಸ್ ಸಹ ನೀಡಲಾಗಿತ್ತು. ಆದರೂ ಕೆಲವರು ಅಲ್ಲಿಯೇ ವಾಸವಾಗಿದ್ದರು ಎಂದು ಅವರು ಹೇಳಿದ್ದಾರೆ.
ಘಟನೆಯ ನಂತರ ಏಳು ಜನರನ್ನು ಕಟ್ಟಡದಿಂದ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.