ಉತ್ತರ ಪ್ರದೇಶದ ಗಾಜಿಯಾಬಾದ್‌ನ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಸಂಭವಿಸಿದ ಭೀಕರ ರಸ್ತೆ ಅಪಘಾತದ ವೀಡಿಯೊ ವೈರಲ್ ಆಗಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ.
ಮೆಹ್ರೌಲಿ ಸೇತುವೆಯಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ತಾಯಿ ಮತ್ತು ಮಗನಿಗೆ ರಾಂಗ್ ಸೈಡ್ ನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಇಬ್ಬರೂ ಗಾಳಿಯಲ್ಲಿ ಹಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಅಪಘಾತ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.
ವೈರಲ್ ವಿಡಿಯೋದಲ್ಲಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ತಾಯಿ ಮತ್ತು ಮಗ ಸ್ಕೂಟರ್ ನಲ್ಲಿ ಹೋಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅತ್ತ ಏಕಾಏಕಿ ರಾಂಗ್ ಸೈಡ್ ನಿಂದ ಆಲ್ಟೋ ಕಾರೊಂದು ಬಂದು ಇಬ್ಬರ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ತಾಯಿ ಮತ್ತು ಮಗನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ತಡರಾತ್ರಿ ಸಾವನ್ನಪ್ಪಿದ್ದಾರೆ.
ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಎತ್ತಿನ ಗಾಡಿಗಳು ಮತ್ತು ಟ್ರ್ಯಾಕ್ಟರ್‌ಗಳ ಮೇಲೆ ನಿಷೇಧವಿದೆ. ಇದರ ಹೊರತಾಗಿಯೂ ಎಕ್ಸ್ ಪ್ರೆಸ್ ವೇಯಲ್ಲಿ ದ್ವಿಚಕ್ರ ವಾಹನಗಳು ಸ್ವಚ್ಛಂದವಾಗಿ ಸಂಚರಿಸುತ್ತವೆ. ಈ ಘಟನೆಯ ನಂತರ, ಪೊಲೀಸರ ಜಾಗರೂಕತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಈ ಕುರಿತು ಎಸಿಪಿ ವೇವ್ ಸಿಟಿ ಪೂನಂ ಮಿಶ್ರಾ ಮಾತನಾಡಿ, ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ದೆಹಲಿಯ ಮಧು ವಿಹಾರ್‌ನ ಯಶ್ ಗೌತಮ್ (20) ತನ್ನ ತಾಯಿ ಮಂಜು (40) ಅವರೊಂದಿಗೆ ಮೀರತ್‌ನಿಂದ ಹೋಗುವ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಲೇನ್‌ನಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಮೆಹ್ರೌಲಿ ಸೇತುವೆಯಲ್ಲಿ ವೇಗವಾಗಿ ಬಂದ ಆಲ್ಟೋ ಕಾರು ರಾಂಗ್ ಸೈಡ್ ನಿಂದ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ. ಆರೋಪಿ ಕಾರು ಚಾಲಕ ವಿಜಯನಗರ ನಿವಾಸಿ ದೇವವ್ರತ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.