ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನೀತಿ ಆಯೋಗದ ಸಭೆಯಲ್ಲಿ ನಡೆಸಿಕೊಂಡ ರೀತಿಯನ್ನು "ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಇಂದು ದೆಹಲಿಯಲ್ಲಿ ನಡೆದ NITI ಆಯೋಗದ 9ನೇ ಆಡಳಿತ ಮಂಡಳಿ ಸಭೆಯಲ್ಲಿ ತಾವು ಮಾತನಾಡುತ್ತಿದ್ದ ವೇಳೆ ತಮ್ಮ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಸಭೆಯಿಂದ ಅರ್ಧಕ್ಕೆ ಹೊರನಡೆದ ನಂತರ ಪ್ರತಿಪಕ್ಷ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ನೀತಿ ಆಯೋಗವು 10 ವರ್ಷಗಳ ಹಿಂದೆ ಸ್ಥಾಪನೆಯಾದಾಗಿನಿಂದ ಸಭೆಯ ಅಧ್ಯಕ್ಷತೆ ವಹಿಸುವ ಪ್ರಧಾನಿ ನರೇಂದ್ರ ಮೋದಿಯವರ "ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಿಡಿ ಕಾರಿದ್ದಾರೆ.
ನೀತಿ ಆಯೋಗವು ಪಕ್ಷಪಾತದಿಂದ ಕೂಡಿದೆ ಮತ್ತು ವೃತ್ತಿಪರತೆಯಿಂದ ಮುಕ್ತವಾಗಿದೆ. ಸಭೆಯಲ್ಲಿ ರಾಜ್ಯಗಳ ನಡುವೆ ಸಮನ್ವಯತೆ ಸಾಧಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಮತಾ ಬ್ಯಾನರ್ಜಿ ಅವರು ತಮ್ಮ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಹೇಳಿರುವುದು "ಸಂಪೂರ್ಣ ಸುಳ್ಳು" ಮತ್ತು ಸಭೆಯಲ್ಲಿದ್ದ ಪ್ರತಿಯೊಬ್ಬ ಮುಖ್ಯಮಂತ್ರಿಗಳಿಗೂ "ಮಾತನಾಡಲು ಸರಿಯಾದ ಸಮಯವನ್ನು ನಿಗದಿಪಡಿಸಲಾಗಿದೆ" ಎಂದು ಹೇಳಿದ್ದಾರೆ.