ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದ್ದು, ಜಾರ್ಖಂಡ್ ಹೈಕೋರ್ಟ್ ಅತ್ಯಂತ ತರ್ಕಬದ್ಧ ತೀರ್ಪು ನೀಡಿದೆ ಎಂದು ಹೇಳಿದೆ.
ಜಾರ್ಖಂಡ್ ಹೈಕೋರ್ಟ್ ತೀರ್ಪನ್ನು ನ್ಯಾಯಮೂರ್ತಿ ಬಿ. ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ. ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್‌ನ ಅವಲೋಕನಗಳು ವಿಚಾರಣಾ ನ್ಯಾಯಾಲಯದ ಮೇಲೆ ಪ್ರಭಾವ ಬೀರಬಾರದು. ಇದು ಅತ್ಯಂತ ತರ್ಕಬದ್ಧವಾದ ತೀರ್ಪು ಆಗಿದೆ. ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ವಿಚಾರಣೆಯ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಸೊರೆನ್ ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ವಿರೋಧಿಸಿದರು. ಸೋರೆನ್ ವಿರುದ್ಧ ಇಡಿ ಪ್ರಕರಣವನ್ನು ದೃಢೀಕರಿಸುವ ದಾಖಲೆಗಳಿವೆ" ಎಂದು ರಾಜು ಸುಪ್ರೀಂಕೋರ್ಟ್ ಗೆ ತಿಳಿಸಿದರು.
ಸೊರೇನ್ ಅವರ ಜಾಮೀನು ರದ್ದುಗೊಳಿಸುವಂತೆ ರಾಜು ಬಲವಾದ ಮನವಿ ಮಾಡಿದರೂ, ಸುಪ್ರೀಂ ಕೋರ್ಟ್, ಅವರ ಹೇಳಿಕೆಗೆ ವಿಶ್ವಾಸಾರ್ಹತೆ ನೀಡಲು ನಿರಾಕರಿಸಿತು ಮತ್ತು ಹೇಮಂತ್ ಅವರಿಗೆ ಯಾಕೆ ಜಾಮೀನು ನೀಡಲಾಗಿದೆ ಎಂಬುದರ ಬಗ್ಗೆ ಹೈಕೋರ್ಟ್ ಮಾನ್ಯವಾದ ಕಾರಣ ನೀಡಿದೆ ಎಂದು ನ್ಯಾಯಪೀಠ ಹೇಳಿತು. ಇದರಿಂದಾಗಿ ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಹೋರಾಡುತ್ತಿದ್ದ ಹೇಮಂತ್ ಸೊರೇನ್ ಅವರಿಗೆ ಇದೀಗ ನೆಮ್ಮದಿ ಸಿಕ್ಕಂತಾಗಿದೆ.