ನವದೆಹಲಿ: ಕಳೆದ ವಾರ ಮಂಡನೆಯಾದ ಕೇಂದ್ರ ಬಜೆಟ್ 2024-25ರಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಹೆಸರೇ ಪ್ರಸ್ತಾಪವಾಗಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ''ಕಾಂಗ್ರೆಸ್ ಅವಧಿ ಬಜೆಟ್‌ನಲ್ಲಿ 26 ರಾಜ್ಯಗಳ ಹೆಸರೇ ಇರಲಿಲ್ಲ'' ಎಂದು ಹೇಳಿದ್ದಾರೆ.
ಬಜೆಟ್ ಕುರಿತ ವಿಪಕ್ಷಗಳ ಆರೋಪಕ್ಕೆ ಇಂದು ಉತ್ತರ ನೀಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 'ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯ ಬಜೆಟ್‌ನಲ್ಲೂ 26 ರಾಜ್ಯಗಳ ಹೆಸರು ಇರಲಿಲ್ಲ. ಹಾಗಂತ, ಆ ರಾಜ್ಯಗಳಿಗೆ ಅನುದಾನ ನೀಡಿಲ್ಲ ಎಂದು ಅರ್ಥವೇ ಎಂದು ಪ್ರಶ್ನಿಸಿದರು.
ಬಜೆಟ್ ಭಾಷಣದಲ್ಲಿ ಕೆಲ ರಾಜ್ಯಗಳ ಹೆಸರು ಇಲ್ಲದ ಕಾರಣ, ಕೇಂದ್ರ ಸರ್ಕಾರವು ಆ ರಾಜ್ಯಗಳಿಗೆ ಅನುದಾನವನ್ನೇ ಕೊಟ್ಟಿಲ್ಲ ಎಂಬ ರೀತಿ ಪ್ರತಿಪಕ್ಷಗಳು ಬಿಂಬಿಸುತ್ತಿಲ್ಲ. ಆದರೆ, ನಾನು 2004-05ರಿಂದಲೂ ಮಂಡಿಸಿದ ಬಜೆಟ್ ಪ್ರತಿಗಳನ್ನು ಗಮನಿಸಿದ್ದೇನೆ. 2004-05ರ ಬಜೆಟ್‌ನಲ್ಲಿ ಅಂದರೆ ಯುಪಿಎ ಅವಧಿಯಲ್ಲಿ ಪ್ರಸ್ತುತಪಡಿಸಿದ ಬಜೆಟ್ ಭಾಷಣದಲ್ಲಿ 17 ರಾಜ್ಯಗಳ ಹೆಸರು ಇರಲಿಲ್ಲ. 2006-07ರಲ್ಲಿ 16, 2009ರಲ್ಲಿ 26 ರಾಜ್ಯಗಳ ಹೆಸರುಗಳೇ ಇರಲಿಲ್ಲ. ಹಾಗಂತ, ಈ ರಾಜ್ಯಗಳಿಗೆ ಹಣವೇ ನೀಡಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
"ನಾನು 2004-2005, 2005-2006, 2006-2007, 2007-2008 ಹೀಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಜೆಟ್ ಭಾಷಣಗಳನ್ನು ಎತ್ತಿಕೊಳ್ಳುತ್ತಿದ್ದೇನೆ. 2004-2005ರ ಬಜೆಟ್ ನಲ್ಲಿ 17 ರಾಜ್ಯಗಳ ಹೆಸರನ್ನು ತೆಗೆದುಕೊಂಡಿಲ್ಲ. ಆಗಿನ ಯುಪಿಎ ಸರ್ಕಾರದ ಸದಸ್ಯರಿಗೆ ನಾನು ಕೇಳಲು ಬಯಸುತ್ತೇನೆ - ಆ 17 ರಾಜ್ಯಗಳಿಗೆ ಹಣ ಹೋಗಲಿಲ್ಲವೇ? ಅವರು ಅದನ್ನು ನಿಲ್ಲಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.
ಅಂತೆಯೇ ಈ ವರ್ಷ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ 17,000 ಕೋಟಿ ರೂಪಾಯಿಗಳ ಗಣನೀಯ ಆರ್ಥಿಕ ಬೆಂಬಲವನ್ನು ಬಜೆಟ್ ಒದಗಿಸಿದೆ. ಇದು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವೆಚ್ಚಕ್ಕೆ 12,000 ಕೋಟಿ ರೂ ಒದಗಿಸುತ್ತದೆ. ಇದು ನಾವು ನಮ್ಮ ಹೆಗಲ ಮೇಲೆ ಹೊರಲು ಬಯಸುವ ಹೊರೆ ಎಂದು ಬಜೆಟ್ ಅನ್ನು ನಿರ್ಮಲಾ ಸಮರ್ಥಿಸಿಕೊಂಡರು.
ಅಂತೆಯೇ ಸಂಸತ್‌ನ ಎಲ್ಲ ಸದಸ್ಯರಿಗೂ ನಾನು ಒಂದು ಮನವಿ ಮಾಡುತ್ತೇನೆ. ಬಜೆಟ್ ಭಾಷಣದಲ್ಲಿ ಯಾವುದಾದರೂ ರಾಜ್ಯಗಳ ಹೆಸರು ಇಲ್ಲ ಎಂದರೆ, ಆ ರಾಜ್ಯಗಳಿಗೆ ಹಣ ನೀಡುವುದಿಲ್ಲ ಎಂದು ಅರ್ಥವಲ್ಲ. ಸುಳ್ಳು ಹಾಗೂ ಜನರ ದಾರಿ ತಪ್ಪಿಸುವ ರೀತಿ ಅಭಿಯಾನ ಆರಂಭಿಸಲಾಗುತ್ತಿದೆ. ಒಂದು ರಾಜ್ಯದ ಹೆಸರನ್ನು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ ಎಂದ ಮಾತ್ರಕ್ಕೆ, ಆ ರಾಜ್ಯಕ್ಕೆ ಅನುದಾನವನ್ನೇ ನೀಡಿಲ್ಲ ಎಂಬ ರೀತಿ ಹೇಳುತ್ತಿರುವುದು ನೋವು ತಂದಿದೆ ಎಂದು ಹೇಳಿದ್ದಾರೆ.
ನಿರ್ಮಲಾ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
ಇನ್ನು ಈ ಹಿಂದೆ ಕೇಂದ್ರ ಬಜೆಟ್ 2024-25ರಲ್ಲಿ ಕರ್ನಾಟಕಕ್ಕೆ ಯಾವುದೇ ರೀತಿಯ ಅನುಕೂಲವಾಗಿಲ್ಲ ಎಂದು ಕಿಡಿಕಾರಿದ್ದ ಸಿಎಂ ಸಿದ್ದರಾಮಯ್ಯ, ಆಯವ್ಯಯದ ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದರು.
ಅಲ್ಲದೆ ನಿರ್ಮಲಾ ಸೀತಾರಾಮನ್ ಅವರ ಪ್ರಕಾರ ಹಿಂದಿನ ಯುಪಿಎ ಸರ್ಕಾರ (2004-2014) ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನ ರೂ.60,779 ಕೋಟಿ. ಎನ್‌ಡಿಎ ಸರ್ಕಾರ (2014-2024) ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ್ದ ಹಣ ರೂ.2,36,955 ಕೋಟಿ ಎಂದು ಸಚಿವೆ ಹೇಳಿದ್ದಾರೆ. ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಎಷ್ಟು ಪಟ್ಟು ಹೆಚ್ಚಾಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಇದು ಅವರ ಅಜ್ಞಾನವೋ, ಇಲ್ಲವೇ ಜನತೆಯ ದಾರಿ ತಪ್ಪಿಸುವ ಹುನ್ನಾರವೋ? ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು.