ಮುಂಬೈ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮೇಲೆ ದಾಳಿಗೆ ಸಂಚು ರೂಪಿಸಿರುವ ಆರೋಪದ ಮೇರೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ನಾಲ್ವರು ಸದಸ್ಯರನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪನ್ವೆಲ್ ಪ್ರದೇಶದಲ್ಲಿನ ಅವರ ಫಾರ್ಮ್‌ಹೌಸ್‌ನಲ್ಲಿ ನಟನ ಮೇಲೆ ದಾಳಿ ಮಾಡಲು ಸಂಚು ರೂಪಿಸಿರುವ ಬಗ್ಗೆ ಸುಳಿವು ಪಡೆದ ನವಿ ಮುಂಬೈ ಪೊಲೀಸರು ಕಳೆದ ತಿಂಗಳಿಂದ ತನಿಖೆಯನ್ನು ಪ್ರಾರಂಭಿಸಿದೆ.ನಾಲ್ವರು ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಬಿಷ್ಣೋಯ್ ಸಹೋದರರ ಆದೇಶದ ಮೇರೆಗೆ ಸಲ್ಮಾನ್ ಖಾನ್ ಅವರು ಕೆಲಸ ಮಾಡುತ್ತಿದ್ದ ಫಾರ್ಮ್‌ಹೌಸ್ ಮತ್ತಿತರ ಕಡೆಗಳಲ್ಲಿ ಗುರಿಯಾಗಿರಿಸಿ ಸಂಚು ರೂಪಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ನವಿ ಮುಂಬೈ ಪೊಲೀಸರು ಎಫ್‌ಐಆರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಅನ್ಮೋಲ್ ಬಿಷ್ಣೋಯ್ ಸೇರಿದಂತೆ 17 ಜನರನ್ನು ಹೆಸರಿಸಿದೆ. ಬಂಧಿತ ನಾಲ್ವರನ್ನು ಧನಂಜಯ್ ತಾಪೇಸಿಂಗ್, ಗೌರವ್ ಭಾಟಿಯಾ, ವಸೀಮ್ ಚಿಕ್ನಾ ಮತ್ತು ರಿಜ್ವಾನ್ ಖಾನ್, ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 120-ಬಿ (ಪಿತೂರಿ) ಮತ್ತು 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿದ್ದು, ಅನ್ಮೋಲ್ ಬಿಷ್ಣೋಯ್ ಯುಎಸ್ ಅಥವಾ ಕೆನಡಾದಲ್ಲಿದ್ದಾರೆ ಎಂದು ನಂಬಲಾಗಿದೆ. ಏಪ್ರಿಲ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಲವು ಸುತ್ತು ಗುಂಡು ಹಾರಿಸಿದ್ದರು.
ಶೂಟರ್‌ಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ಗುಜರಾತ್‌ನಿಂದ ಬಂಧಿಸಲಾಗಿದೆ. ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ತಲುಪಿಸಿದ ಸೋನು ಬಿಷ್ಣೋಯ್ ಮತ್ತು ಅನುಜ್ ಥಾಪನ್ ಅವರನ್ನು ನಂತರ ಪಂಜಾಬ್‌ನಿಂದ ಬಂಧಿಸಲಾಗಿತ್ತು. ಥಾಪನ್ ಮೇ 1 ರಂದು ಪೊಲೀಸ್ ಠಾಣೆಯಲ್ಲೇ ನೇಣು ಬಿಗಿದುಕೊಂಡು ಮೃತಪಟ್ಟಿದ್ದ. ನಂತರ ಮುಂಬೈ ಪೊಲೀಸರು ಹೆಚ್ಚಿನವರನ್ನು ಬಂಧಿಸಿದ್ದಾರೆ.