ಕೋಲ್ಕತ್ತಾ: ಚುನಾವಣೋತ್ತರ ಹಿಂಸಾಚಾರದಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಗುಂಪೊಂದು ಹತ್ಯೆ ಮಾಡಿದ್ದು, ಕೇಸರಿ ಪಕ್ಷವು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನತ್ತ ಬೆರಳು ಮಾಡಿದೆ. ಆದರೆ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಟಿಎಂಸಿ ಹೇಳಿದೆ.
ಜಿಲ್ಲೆಯ ಉತ್ತರ ಭಾಗದ ಕಲಿಗಂಜ್‌ನಲ್ಲಿ ಶನಿವಾರ ರಾತ್ರಿ ಬಿಜೆಪಿ ಕಾರ್ಯಕರ್ತ ಹಫೀಜುರ್ ಶೇಖ್ ಇತರರೊಂದಿಗೆ ಕೇರಂ ಆಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
10-12 ಮಂದಿ ಮೋಟಾರು ಬೈಕ್‌ಗಳಲ್ಲಿ ಬಂದು ಮೊದಲು ಶೇಖ್‌ಗೆ ಗುಂಡು ಹಾರಿಸಿದ್ದಾರೆ. ಶೇಖ್ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಸ್ಥಳೀಯರು ಶವವನ್ನು ಮೇಲೆತ್ತಲು ಪೊಲೀಸರಿಗೆ ಅವಕಾಶ ನೀಡಲಿಲ್ಲ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಟಿಎಂಸಿ ಗೂಂಡಾಗಳು ಪಕ್ಷದ ಕಾರ್ಯಕರ್ತನನ್ನು ಕೊಂದಿದ್ದಾರೆ ಎಂದು ಬಿಜೆಪಿಯ ಉತ್ತರ ನಾಡಿಯಾ ಘಟಕದ ಅಧ್ಯಕ್ಷ ಅರ್ಜುನ್ ಬಿಸ್ವಾಸ್ ಆರೋಪಿಸಿದ್ದಾರೆ.
ಜಿಲ್ಲಾ ಟಿಎಂಸಿ ನಾಯಕ ರುಕ್ಬಾನೂರ್ ರೆಹಮಾನ್, ಹತ್ಯೆಗೆ ಕೌಟುಂಬಿಕ ಕಲಹವೇ ಕಾರಣವಾಗಿದೆ ಮತ್ತು ಈ ಹತ್ಯೆಯ ಹಿಂದೆ ತೃಣಮೂಲ ಕಾಂಗ್ರೆಸ್‌ನ ಪಾತ್ರವಿಲ್ಲ ಎಂದಿದ್ದಾರೆ.
ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಮೃತರ ಕುಟುಂಬಸ್ಥರು ಒತ್ತಾಯಿಸಿದ್ದಾರೆ.