ನವದೆಹಲಿ: ಜೂನ್ 4 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 150 ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂಬ ಆರೋಪದ ಕುರಿತು ಚುನಾವಣಾ ಆಯೋಗವು (ಇಸಿ) ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರಿಂದ ಭಾನುವಾರ ಮಾಹಿತಿ ಕೇಳಿದೆ.
ಜೈರಾಮ್ ರಮೇಶ್ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಭಾನುವಾರ ಸಂಜೆ 7 ಗಂಟೆಯೊಳಗೆ ತಮ್ಮ ಆರೋಪಗಳ ಕುರಿತಾದ ಸಮಗ್ರ ವಿವರಗಳನ್ನು ಹಂಚಿಕೊಳ್ಳುವಂತೆ ಕೇಳಿದೆ. ಚುನಾವಣಾ ಆಯೋಗವು ಜೂನ್ 1ರಂದು ಜೈರಾಮ್ ರಮೇಶ್ ಅವರು ಮಾಡಿದ್ದ ಟ್ವೀಟ್ ಅನ್ನು ಉಲ್ಲೇಖಿಸಿ ಮಾಹಿತಿ ಕೇಳಿದೆ.
'ಅಧಿಕಾರದಿಂದ ಕೆಳಗಿಳಿಯಲಿರುವ ಕೇಂದ್ರ ಗೃಹ ಸಚಿವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ, ಮಾತನಾಡಿದ್ದಾರೆ. ಇದುವರೆಗೆ ಅವರು 150 ಜನರೊಂದಿಗೆ ಮಾತನಾಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದ್ದು, ಬಿಜೆಪಿ ಎಷ್ಟು ಹತಾಶವಾಗಿದೆ ಎಂಬುದನ್ನು ತೋರಿಸುತ್ತದೆ' ಎಂದು ಟ್ವೀಟ್ ಮಾಡಿದ್ದರು.
'ಇದು ಬಹಳ ಸ್ಪಷ್ಟವಾಗಿದೆ. ಜನರ ಇಚ್ಛೆಯು ಮೇಲುಗೈ ಸಾಧಿಸುತ್ತದೆ ಮತ್ತು ಜೂನ್ 4 ರಂದು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಜೆಪಿ ನಿರ್ಗಮಿಸುತ್ತದೆ. ಇಂಡಿಯಾ ಮೈತ್ರಿಕೂಟ ವಿಜಯಶಾಲಿಯಾಗಲಿದೆ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗಬಾರದು ಮತ್ತು ಸಂವಿಧಾನವನ್ನು ಎತ್ತಿ ಹಿಡಿಯಬೇಕು. ಅವರು ತೀವ್ರ ನಿಗಾದಲ್ಲಿದ್ದಾರೆ' ಎಂದಿದ್ದರು.
'ಮತ ಎಣಿಕೆ ಪ್ರಕ್ರಿಯೆಯು ಪ್ರತಿಯೊಬ್ಬ ಚುನಾವಣಾಧಿಕಾರಿಯ ಪವಿತ್ರ ಕರ್ತವ್ಯವಾಗಿದೆ ಮತ್ತು ಅಂತಹ ಸಾರ್ವಜನಿಕ ಹೇಳಿಕೆಗಳು ಅನುಮಾನವನ್ನು ಉಂಟುಮಾಡುತ್ತವೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಲು ಅರ್ಹವಾಗಿದೆ' ಎಂದು ಚುನಾವಣಾ ಆಯೋಗ ರಮೇಶ್ ಅವರಿಗೆ ತಿಳಿಸಿದೆ.
'ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಎಲ್ಲ ಅಧಿಕಾರಿಗಳು ಆಯೋಗದ ಡೀಮ್ಡ್ ಡೆಪ್ಯುಟೇಶನ್ ಅಡಿಯಲ್ಲಿರುತ್ತಾರೆ ಮತ್ತು ಅವರು ಯಾವುದೇ ನಿರ್ದೇಶನಗಳಿಗಾಗಿ ನೇರವಾಗಿ ಚುನಾವಣಾ ಆಯೋಗಕ್ಕೆ ವರದಿ ಮಾಡುತ್ತಾರೆ. ಆದಾಗ್ಯೂ, ನೀವು ಆರೋಪಿಸಿದಂತೆ ಯಾವುದೇ ಜಿಲ್ಲಾಧಿಕಾರಿಗಳು ಅನಗತ್ಯ ಪ್ರಭಾವ ಬೀರಲು ಯತ್ನಿಸಿರುವ ಬಗ್ಗೆ ವರದಿ ಮಾಡಿಲ್ಲ' ಎಂದು ಅದು ಕಾಂಗ್ರೆಸ್ ನಾಯಕನಿಗೆ ತಿಳಿಸಿದೆ.
'ಗೃಹ ಸಚಿವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ ಎಂದು ಹೇಳಲಾದ 150 ಜಿಲ್ಲಾಧಿಕಾರಿಗಳ ವಿವರಗಳನ್ನು ನಿಮ್ಮ ಮಾಹಿತಿಯ ಆಧಾರದೊಂದಿಗೆ ಇಂದು ಸಂಜೆ 7 ಗಂಟೆಯೊಳಗೆ ಹಂಚಿಕೊಳ್ಳಲು ವಿನಂತಿಸಲಾಗಿದೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬಹುದು. ರಾಷ್ಟ್ರೀಯ ಪಕ್ಷವೊಂದರ ಜವಾಬ್ದಾರಿಯುತ, ಅನುಭವಿ ಮತ್ತು ಅತ್ಯಂತ ಹಿರಿಯ ನಾಯಕರಾಗಿರುವ ಜೈರಾಮ್ ರಮೇಶ್ ಅವರು ತಾವು ಸತ್ಯವೆಂದು ನಂಬಿರುವ ಮಾಹಿತಿ ಆಧಾರದ ಮೇಲೆ ಮತ ಎಣಿಕೆಯ ದಿನಕ್ಕೂ ಮೊದಲು ಇಂತಹ ಸಾರ್ವಜನಿಕ ಹೇಳಿಕೆಯನ್ನು ನೀಡಿರಬೇಕು' ಎಂದಿದೆ.