ಲಖನೌ: ತೀವ್ರ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದ ಉತ್ತರ ಪ್ರದೇಶದಲ್ಲಿ INDIA ಒಕ್ಕೂಟ ಗಮನಾರ್ಹ ಸಾಧನೆ ಮಾಡಿದೆ.
ಹೌದು... ಉತ್ತರ ಪ್ರದೇಶ 80 ಲೋಕಸಭಾ ಕ್ಷೇತ್ರಗಳ ಪೈಕಿ 41ರಲ್ಲಿ INDIA ಒಕ್ಕೂಟ ಮುನ್ನಡೆ ಸಾಧಿಸಿದ್ದು, 36 ಕ್ಷೇತ್ರಗಳಲ್ಲಿ NDA ಮುನ್ನಡೆ ಕಾಯ್ದುಕೊಂಡಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಆಜಾದ್ ಸಮಾಜ ಪಕ್ಷ (ಕಾನ್ಶಿ ರಾಮ್)ದ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಉಳಿದಂತೆ ಕೇಂದ್ರ ಸಚಿವರಾದ ಸ್ಮೃತಿ ಇರಾನಿ (ಅಮೇಠಿ) ಮತ್ತು ಅನುಪ್ರಿಯಾ ಪಟೇಲ್ (ಅಪ್ನಾ ದಳ (ಎಸ್)) (ಮಿರ್ಜಾಪುರ), ಮತ್ತು ಹಿರಿಯ ಬಿಜೆಪಿ ನಾಯಕಿ ಮೇನಕಾ ಗಾಂಧಿ (ಸುಲ್ತಾನ್‌ಪುರ) ಅವರು ಹಿನ್ನಡೆಯಲ್ಲಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ, ಎನ್‌ಡಿಎ 80 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಗೆದ್ದಿತ್ತು. ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳು ಕ್ರಮವಾಗಿ 10 ಮತ್ತು ಐದು ಸ್ಥಾನಗಳನ್ನು ಗೆದ್ದಿದ್ದವು.
ಅಮೇಠಿಯಲ್ಲಿ ಸ್ಮೃತಿ ಇರಾನಿ 23 ಸಾವಿರ ಮತಗಳ ಹಿನ್ನಡೆ
ಇನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಲ್ಲಿ 23 ಸಾವಿರಕ್ಕೂ ಅಧಿಕ ಮತಗಳ ಅಂತರದ ಹಿನ್ನಡೆಯಲ್ಲಿದ್ದಾರೆ. ಸ್ಮೃತಿ ಇರಾನಿ ಒಟ್ಟು 59,149 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಪಕ್ಷದ ಕಿಶೋರಿ ಲಾಲ್ ಶರ್ಮಾ 82,577 ಮತಗಳನ್ನು ಪಡೆದಿದ್ದಾರೆ.
ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮುನ್ನಡೆ
ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 87,000 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದು, ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ 57,740 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬ್ರಿಜ್ ಭೂಷಣ್ ಸಿಂಗ್ ಪುತ್ರನ ಮುನ್ನಡೆ
ಇನ್ನು ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತದ ಮಾಜಿ ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಪುತ್ರ ಕರಣ್ ಭೂಷಣ್ ಸಿಂಗ್ ಪ್ರಸ್ತುತ ಕೈಸರ್‌ಗಂಜ್ ಕ್ಷೇತ್ರದಲ್ಲಿ 31,159 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದ ಹಿನ್ನಲೆಯಲ್ಲಿ ಬ್ರಿಜ್ ಭೂಷಣ್ ಗೆ ಟಿಕೆಟ್ ಕೈತಪ್ಪಿ ಅವರ ಮಗನಿಗೆ ನೀಡಲಾಗಿತ್ತು. ಅಂತೆಯೇ ಇತ್ತ ಸಿಎಂ ಯೋಗಿ ಆದಿತ್ಯಾನಾಥ್ ತವರೂರು ಗೋರಖ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ನಟ ರವಿಕಿಶನ್ ಮುನ್ನಡೆ ಸಾಧಿಸಿದ್ದು, 14,541ಮತಗಳ ಮುನ್ನಡೆ ಸಾಧಿಸಿದ್ದಾರೆ.