ನವದೆಹಲಿ: ಲೋಕಸಭೆ ಚುನಾವಣೆ 2024ರ ಮತ ಎಣಿಕೆ ಪ್ರಗತಿಯಲ್ಲಿದೆ. ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು(NDA) 200 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಆರು ವಾರಗಳ ಅವಧಿಯಲ್ಲಿ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸುಮಾರು 642 ಮಿಲಿಯನ್ ಜನರು ಮತ ಚಲಾಯಿಸಿದ್ದಾರೆ. ಬಿಗಿ ಭದ್ರತೆಯ ನಡುವೆ ಅಂಚೆ ಮತಪತ್ರಗಳ ಮೂಲಕ ಮತ ಎಣಿಕೆ ಆರಂಭವಾಯಿತು.
ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳು ಮತ್ತು ಒಡಿಶಾದ 147 ವಿಧಾನಸಭಾ ಕ್ಷೇತ್ರಗಳ ರಾಜ್ಯ ವಿಧಾನಸಭೆ ಮತ್ತು 25 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಗಳ ಎಣಿಕೆ ಕೂಡ ನಡೆಯುತ್ತಿದೆ.
ಲೋಕಸಭೆಯ 543 ಸ್ಥಾನಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಿತು.ಭಾರತೀಯ ಜನತಾ ಪಕ್ಷವು ಸತತ ಮೂರನೇ ಬಾರಿಗೆ ಅಧಿಕಾರದ ಮೇಲೆ ಕಣ್ಣಿಟ್ಟಿದೆ, ಇಂಡಿಯಾ ಬ್ಲಾಕ್‌ನಡಿ ವಿರೋಧ ಪಕ್ಷಗಳು ಆಡಳಿತ ಪಕ್ಷದಿಂದ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ.
ಹೆಚ್ಚಿನ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರನೇ ಅವಧಿಯಲ್ಲಿ ಅಧಿಕಾರದ ಗದ್ದುಗೆ ಏರುವ ಭವಿಷ್ಯ ನುಡಿದಿದ್ದವು. ಕೆಲವು ಸಮೀಕ್ಷೆಗಳಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಮೂರನೇ ಎರಡರಷ್ಟು ಬಹುಮತ ಬರುತ್ತದೆ ಎಂದಿದ್ದವು.
ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ 8,000 ಅಭ್ಯರ್ಥಿಗಳ ಮತ ಎಣಿಕೆ ಸುಗಮವಾಗಿ ನಡೆಯಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.