ನವದೆಹಲಿ: ಬಿಜೆಪಿ ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್(ಎನ್ ಡಿಎ) ಹೊಸ ಸರ್ಕಾರ ರಚಿಸಲು ಸಿದ್ಧವಾಗುತ್ತಿದ್ದಂತೆ, ಅದರ ಪ್ರಮುಖ ಮಿತ್ರಪಕ್ಷಗಳಲ್ಲಿ ಒಂದಾದ ಜೆಡಿ(ಯು), 'ಒಂದು ರಾಷ್ಟ್ರ, ಒಂದು ಚುನಾವಣೆ' ಜಾರಿಗೆ ಬೆಂಬಲ ನೀಡಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ' ಜಾರಿ ಭರವಸೆ ನೀಡಿತ್ತು.
ಕಾಂಗ್ರೆಸ್, ಟಿಎಂಸಿ ಮತ್ತು ಸಿಪಿಎಂ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದರು. ಒಂದು ರಾಷ್ಟ್ರ, ಒಂದು ಚುನಾವಣೆ' ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷಗಳು ಹೇಳಿದ್ದವು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಜೆಡಿ(ಯು) ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಕೆ ಸಿ ತ್ಯಾಗಿ ಅವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು 'ಒಂದು ರಾಷ್ಟ್ರ, ಒಂದು ಚುನಾವಣೆ' ಅನುಷ್ಠಾನವನ್ನು ನಮ್ಮ ಪಕ್ಷವು ಬೆಂಬಲಿಸುತ್ತದೆ ಎಂದು ಹೇಳಿದರು.
"ನಾವು ಯಾವಾಗಲೂ 'ಒಂದು ರಾಷ್ಟ್ರ, ಒಂದು ಚುನಾವಣೆಯ' ಪರಿಕಲ್ಪನೆಯನ್ನು ಬೆಂಬಲಿಸಿದ್ದೇವೆ" ಎಂದು ಅವರು ಹೇಳಿದರು.
ಸಮ್ಮಿಶ್ರ ಸರ್ಕಾರಕ್ಕೆ ಜೆಡಿ(ಯು) ಬೆಂಬಲ ಮಹತ್ವದ್ದಾಗಿದೆ ಏಕೆಂದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ ಸಂಬಂಧ ಸಾಂವಿಧಾನಿಕ ತಿದ್ದುಪಡಿ ಅಗತ್ಯವಿದ್ದು, ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಅಂಗೀಕರಿಸಬೇಕಾಗಿದೆ.
ಆದಾಗ್ಯೂ, ತಿದ್ದುಪಡಿಗಳಿಗೆ ರಾಜ್ಯ ಸರ್ಕಾರಗಳ ಒಪ್ಪಿಗೆ ಅಗತ್ಯವಿಲ್ಲ. ಎನ್‌ಡಿಎ 290 ಸ್ಥಾನಗಳ ಗಡಿ ದಾಟಿದ್ದರೂ, ಲೋಕಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿಲ್ಲ ಮತ್ತು ಅದರ ಎರಡು ಮಿತ್ರಪಕ್ಷಗಳಾದ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಕಿಂಗ್‌ಮೇಕರ್‌ಗಳಾಗಿ ಹೊರಹೊಮ್ಮಿವೆ.
2024 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯು 12 ಸ್ಥಾನಗಳನ್ನು ಗೆದ್ದುಕೊಂಡರೆ, ಟಿಡಿಪಿ ಆಂಧ್ರಪ್ರದೇಶದಲ್ಲಿ 17 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.