ನವದೆಹಲಿ: ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನು ಈಡೇರಿಸುವಿರಾ ಎಂದು ಕಾಂಗ್ರೆಸ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ 3.0 ಸರ್ಕಾರ ರಚನೆಯಾಗಲಿದೆ ಎಂದು ಪದೇ ಪದೇ ಹೇಳಲಾಗುತ್ತಿದೆ ಆದರೆ ಈ ಬಾರಿ ಅದು "ಮೋದಿ 1/3 ಸರ್ಕಾರ" ಎಂಬುದು ಸತ್ಯ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋ ಸಂದೇಶದಲ್ಲಿ, ಕಾಂಗ್ರೆಸ್ ಪ್ರಧಾನಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ಎರಡು ಆಂಧ್ರಪ್ರದೇಶಕ್ಕೆ, ಮತ್ತೆರಡು ಬಿಹಾರಕ್ಕೆ ಸೇರಿದೆ. ಏಪ್ರಿಲ್ 30, 2014 ರಂದು, ಪವಿತ್ರ ನಗರವಾದ ತಿರುಪತಿಯಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುತ್ತೇವೆ. ಇದರಿಂದ ಭಾರಿ ಬಂಡವಾಳ ಹೂಡಿಕೆ ಬರುತ್ತದೆ ಎಂದು ಭರವಸೆ ನೀಡಿದ್ದೀರಿ. ಆದರೆ 10 ವರ್ಷಗಳು ಕಳೆದರೂ ಅದು ಆಗಿಲ್ಲ. ಆ ಭರವಸೆ ಈಗ ಈಡೇರುತ್ತದೆಯೇ? ಪ್ರಧಾನಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವರೇ ಎಂದಿದ್ದಾರೆ.
ವಿಶಾಖಪಟ್ಟಣಂನಲ್ಲಿರುವ ಉಕ್ಕು ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ. ಎಲ್ಲ ಪಕ್ಷಗಳು ಇದನ್ನು ವಿರೋಧಿಸುತ್ತಿವೆ, ನೀವು ಈಗ ವಿಶಾಖಪಟ್ಟಣಂ ಉಕ್ಕ ಕಾರ್ಖಾನೆ ಖಾಸಗೀಕರಣವನ್ನು ನಿಲ್ಲಿಸುತ್ತೀರಾ? ಎಂದು ರಮೇಶ್ ಕೇಳಿದ್ದಾರೆ.
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ 2014 ರಲ್ಲಿ ನೀಡಿದ್ದ ಚುನಾವಣಾ ಭರವಸೆ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಹತ್ತು ವರ್ಷಗಳ ಹಿಂದಿನ ಬೇಡಿಕೆಯನ್ನು ಈಡೇರಿಸುತ್ತೀರಾ ಎಂದು ಪ್ರಧಾನಿಯನ್ನು ರಮೇಶ್ ಕೇಳಿದ್ದು, ಈ ಬೇಡಿಕೆಯಿದ್ದರೂ ಪ್ರಧಾನಿ ಮಾತ್ರ ಈ ವಿಚಾರದಲ್ಲಿ ಮೌನ ಮುರಿದಿಲ್ಲ ಎಂದಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್ ಮತ್ತು ನಿತೀಶ್ ಕುಮಾರ್ ಅವರ ಮಹಾಘಟಬಂಧನ್ ಸರ್ಕಾರ ಬಿಹಾರದಲ್ಲಿ ಜಾತಿ ಸಮೀಕ್ಷೆ ನಡೆಸಿದೆ. ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಬೇಕೆಂದು ನಾವು ಒತ್ತಾಯಿಸಿದ್ದೇವೆ. ನಿತೀಶ್ ಕುಮಾರ್ ಕೂಡ ಇದನ್ನು ಬೆಂಬಲಿಸಿದ್ದಾರೆ. ಬಿಹಾರದಲ್ಲಿ ಮಾಡಿದಂತೆ ಇಡೀ ದೇಶದಲ್ಲಿ ಜಾತಿ ಗಣತಿ ನಡೆಸುವುದಾಗಿ ಭರವಸೆ ನೀಡುತ್ತೀರಾ? ಎಂದು ಪ್ರಧಾನಿಯನ್ನು ಕೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಕಂಡುಬಂದ ನಂತರ ಬಿಹಾರ ಮತ್ತು ಆಂಧ್ರ ಪ್ರದೇಶದ ಬಗ್ಗೆ ಕಾಂಗ್ರೆಸ್ ನಿಲುವುಗಳು ಮುನ್ನೆಲೆಗೆ ಬಂದಿದೆ. ಆದರೆ, ಟಿಡಿಪಿ ಮತ್ತು ಜೆಡಿಯು ಈಗಾಗಲೇ ವಿರೋಧ ಪಕ್ಷದ ಮೈತ್ರಿಗೆ ಪಕ್ಷಾಂತರ ಮಾಡುವ ಸಲಹೆಗಳನ್ನು ತಳ್ಳಿಹಾಕಿದ್ದು, ಎನ್‌ಡಿಎ ಜೊತೆಯಲ್ಲಿಯೇ ಇರುವುದಾಗಿ ಸ್ಪಷ್ಟವಾಗಿ ಹೇಳಿವೆ.