ನವದೆಹಲಿ: ಬಿಜೆಪಿ ನೇತೃತ್ವದ ಹೊಸ ಎನ್ ಡಿಎ ಸರ್ಕಾರದಲ್ಲಿ ಇಬ್ಬರು ಸಂಪುಟ ದರ್ಜೆ ಸಚಿವರು ಸೇರಿದಂತೆ ಏಳು ಮಹಿಳೆಯರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ಹಿಂದಿನ ಸಚಿವ ಸಂಪುಟದಲ್ಲಿ 10 ಮಹಿಳಾ ಸಚಿವರಿದ್ದರು. ಈ ಬಾರಿ ಮಹಿಳಾ ಸಚಿವರ ಸಂಖ್ಯೆ ಏಳಕ್ಕೆ ಇಳಿಕೆಯಾಗಿದೆ. ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಾಜಿ ರಾಜ್ಯ ಸಚಿವೆ ಡಾ ಭಾರತಿ ಪವಾರ್, ಸಾಧ್ವಿ ನಿರಂಜನ್ ಜ್ಯೋತಿ, ದರ್ಶನಾ ಜರ್ದೋಶ್, ಮೀನಾಕ್ಷಿ ಲೇಖಿ ಮತ್ತು ಪ್ರತಿಮಾ ಭೂಮಿಕ್ ಅವರನ್ನು ಈ ಬಾರಿ ಕೈಬಿಡಲಾಗಿದೆ.
ಮಾಜಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಸಂಸದರಾದ ಅನ್ನಪೂರ್ಣ ದೇವಿ, ಶೋಭಾ ಕರಂದ್ಲಾಜೆ, ರಕ್ಷಾ ಖಡ್ಸೆ, ಸಾವಿತ್ರಿ ಠಾಕೂರ್ ಮತ್ತು ನಿಮುಬೆನ್ ಬಂಬಾನಿಯಾ ಹಾಗೂ ಅಪ್ನಾ ದಳದ ಸಂಸದೆ ಅನುಪ್ರಿಯಾ ಪಟೇಲ್ ಅವರು ಮೋದಿ 3.0 ಸಂಪುಟಕ್ಕೆ ಸೇರ್ಪಡೆಗೊಂಡ ಹೊಸ ಸಚಿವರಾಗಿದ್ದಾರೆ.
ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಉಳಿದ ಐವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇರಾನಿ ಮತ್ತು ಪವಾರ್ ಅವರು ಕ್ರಮವಾಗಿ ಅಮೇಥಿ ಮತ್ತು ದಂಡೋರಿಯಲ್ಲಿ ಸೋಲು ಅನುಭವಿಸಿದ್ದಾರೆ. ಜ್ಯೋತಿ, ಜರ್ದೋಶ್, ಲೇಖಿ ಮತ್ತು ಭೂಮಿಕ್ ಅವರನ್ನು ಬಿಜೆಪಿ ಈ ಬಾರಿ ಕಣಕ್ಕಿಳಿಸಲಿಲ್ಲ.
ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ಒಟ್ಟು 74 ಮಹಿಳೆಯರು ಗೆದ್ದಿದ್ದಾರೆ, 2019 ರಲ್ಲಿ 78 ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದರು.