ದೇಶ

Modi 3.0: ಸಮಗ್ರ ರಕ್ಷಣಾ ಸುಧಾರಣೆ ಈಗ ಸರ್ಕಾರದ ಹೊಣೆ

ಅಭಿವೃದ್ಧಿಗಳ ಜೊತೆಗೆ, ಭಾರತೀಯ ಸೇನಾಪಡೆಗಳನ್ನು ಆಧುನಿಕ ಪಡೆಗಳಾಗಿ ಪರಿವರ್ತಿಸಲು ಇನ್ನಷ್ಟು ಸುಧಾರಣೆಗಳು ಬೇಕಿವೆ. ಇದಕ್ಕಾಗಿ ನೂತನ ಮೋದಿ ಸರ್ಕಾರ ಕೈಗೊಳ್ಳಬಹುದಾದ ಐದು ಪ್ರಮುಖ ನಿರ್ಧಾರಗಳು ಇಂತಿವೆ...

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಲೋಕಸಭಾ ಚುನಾವಣಾ ಪ್ರಕ್ರಿಯೆ ಇತ್ತೀಚೆಗೆ ಪೂರ್ಣಗೊಂಡಿದ್ದು, ಭಾರತೀಯ ಜನತಾ ಪಾರ್ಟಿ (ಬಿಜೆಪಿ) 240 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಯಶಸ್ಸಿನೊಡನೆ, ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಬಿಜೆಪಿ ಗಳಿಸಿದ ಸ್ಥಾನಗಳು ಬಹುಮತಕ್ಕೆ ಬೇಕಾದ 272 ಸ್ಥಾನಗಳಿಗಿಂತ ಕಡಿಮೆಯಾದರೂ, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಮೈತ್ರಿಕೂಟ ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವಷ್ಟು ಸ್ಥಾನಗಳನ್ನು ಸಂಪಾದಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ, 72 ಎನ್‌ಡಿಎ ಮುಖಂಡರು ಮೋದಿಯವರ ಸಚಿವ ಸಂಪುಟದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ನೂತನ ಸರ್ಕಾರದ ಸ್ಥಾಪನೆಯೂ ಆಗಿದೆ.

ಭಾರತೀಯ ಸೇನಾಪಡೆಗಳ ಅಭಿವೃದ್ಧಿಯ ಹಾದಿ

ಕಳೆದ ಒಂದು ದಶಕದ ಅವಧಿಯಲ್ಲಿ, ಭಾರತೀಯ ಸೇನಾಪಡೆಗಳು ಸಾಕಷ್ಟು ಸವಾಲುಗಳನ್ನು ಎದುರಿಸಿವೆ. 2020ರಲ್ಲಿ, ಭಾರತೀಯ ಸೇನೆ ಮತ್ತು ಚೀನಾದ ಪಡೆಗಳು ಲಡಾಖ್‌ನ ಗಲ್ವಾನ್ ಕಣಿವೆ ಮತ್ತು ಪಾಂಗಾಂಗ್ ತ್ಸೊ ಸರೋವರಗಳ ಬಳಿ ಚಕಮಕಿ ನಡೆಸಿದ ಬಳಿಕ, ಎರಡೂ ದೇಶಗಳ ನಡುವೆ ಉದ್ವಿಗ್ನತೆ ತಲೆದೋರಿತು.

2016ರಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಗಡಿಯಾದ್ಯಂತ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಬಳಿಕ, 2019ರಲ್ಲಿ ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಪ್ರದೇಶದಲ್ಲಿ ಭಾರತ ಬಾಂಬ್ ದಾಳಿಯನ್ನೂ ನಡೆಸಿತು.

ಕಳೆದ ದಶಕದಲ್ಲಿ, ಭಾರತೀಯ ಸೇನಾ ವಿಭಾಗಗಳ ಯುದ್ಧ ಸಿದ್ಧತಾ ಸಾಮರ್ಥ್ಯ ಬಹಳಷ್ಟು ಸುಧಾರಿಸಿದೆ. 2010ರ ದಶಕದ ಆರಂಭದಲ್ಲಿ, ಪೂರ್ಣ ಪ್ರಮಾಣದ ಯುದ್ಧವೇನಾದರೂ ಸಂಭವಿಸಿದ್ದರೆ, ಭಾರತದ ಬಳಿ ಕೇವಲ 20 ದಿನಗಳಿಗಾಗುವಷ್ಟು ಆಯುಧ ಸಂಗ್ರಹಣೆ ಇತ್ತು. ಕೆಲವು ಉಪಕರಣಗಳಂತೂ ಒಂದು ವಾರಕ್ಕೂ ಸಾಲುತ್ತಿರಲಿಲ್ಲ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸೇನಾ ಪಡೆಗಳು ದೇಶೀಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಅವುಗಳ ಪರಿಣಾಮಗಳು ಈಗ ಕಂಡುಬರುತ್ತಿವೆ. ಮುಂದಿನ ವರ್ಷದಿಂದ, ತಾನು ಕೆಲವು ಅವಶ್ಯಕ ಉಪಕರಣಗಳನ್ನು ಸಣ್ಣ ಪ್ರಮಾಣದಲ್ಲಿ ಆಮದು ನಡೆಸುವ ಹೊರತು, ವಿದೇಶೀ ಆಯುಧಗಳ ಆಮದನ್ನು ಸ್ಥಗಿತಗೊಳಿಸುವುದಾಗಿ ಭಾರತೀಯ ಸೇನೆ ಘೋಷಿಸಿದೆ.

ಭಾರತೀಯ ಸೇನೆ ಈಗಾಗಲೇ ಸ್ವದೇಶಿ ನಿರ್ಮಾಣದ 118 ಅರ್ಜುನ್ ಎಂಕೆ-1ಎ ಯುದ್ಧ ಟ್ಯಾಂಕ್‌ಗಳ (ಎಂಬಿಟಿ) ಖರೀದಿಗೆ ಆದೇಶ ಸಲ್ಲಿಸಿದೆ. ಭಾರತೀಯ ವಾಯು ಸೇನೆ ಹೆಚ್ಚುವರಿ 97 ತೇಜಸ್ ಎಂಕೆ-1ಎ ಯುದ್ಧ ವಿಮಾನಗಳಿಗೆ ಖರೀದಿ ಆದೇಶ ನೀಡಿದೆ. ಭಾರತೀಯ ನೌಕಾ ಸೇನೆಯ ಮೂರನೇ ವಿಮಾನವಾಹಕ ನೌಕೆಯ ಬೇಡಿಕೆಗೆ ಸರ್ಕಾರ ಈಗಾಗಲೇ ಅಸ್ತು ಎಂದಿದ್ದು, ನೌಕಾಪಡೆ ಮತ್ತು ವಾಯುಪಡೆಗಾಗಿ ಫ್ರೆಂಚ್ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ.

ಇವೆಲ್ಲ ಅಭಿವೃದ್ಧಿಗಳ ಜೊತೆಗೆ, ಭಾರತೀಯ ಸೇನಾಪಡೆಗಳನ್ನು ಆಧುನಿಕ ಪಡೆಗಳಾಗಿ ಪರಿವರ್ತಿಸಲು ಇನ್ನಷ್ಟು ಸುಧಾರಣೆಗಳು ಬೇಕಿವೆ. ಇದಕ್ಕಾಗಿ ನೂತನ ಸರ್ಕಾರ ಕೈಗೊಳ್ಳಬಹುದಾದ ಐದು ಪ್ರಮುಖ ನಿರ್ಧಾರಗಳು ಇಂತಿವೆ:

1. 'ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ಸ್' ಸ್ಥಾಪನೆ

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಆರಂಭದ ದಿನಗಳಲ್ಲೇ ಸೇನಾಪಡೆಗಳು ದೀರ್ಘಾವಧಿಯ ಯುದ್ಧಕ್ಕೆ ಯೋಜನೆ ರೂಪಿಸುವ ಮತ್ತು ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದುವ ಅವಶ್ಯಕತೆ ಜಗತ್ತಿಗೆ ತಿಳಿಯಿತು.

ರಷ್ಯಾ ಆರಂಭದಲ್ಲಿ ಕೀವ್ ಕಡೆ ಮುಂದೊತ್ತಿ ಸಾಗಿದಾಗಲೂ, ರಷ್ಯನ್ ವಾಯು ಸೇನೆಯ ಗೈರು ಕಂಡುಬಂದಿತ್ತು. ಕಾಲಾಳುಪಡೆ ಮತ್ತು ಆರ್ಟಿಲರಿ ಬೆಂಬಲವಿಲ್ಲದೆಯೇ ಟ್ಯಾಂಕ್‌ಗಳು ಉಕ್ರೇನಿನ ಹೆದ್ದಾರಿಗಳಲ್ಲಿ ಸಾಗಿದ್ದವು.

ರಷ್ಯನ್ ಸೇನಾ ವಿಭಾಗಗಳ ಸಮನ್ವಯದ ಕೊರತೆಯ ಕಾರಣದಿಂದಾಗಿ ಯೋಧರು ಸಾವಿಗೀಡಾಗಿ, ಉಪಕರಣಗಳು ನಷ್ಟಗೊಂಡು, ಆಕ್ರಮಣ ಸ್ಥಗಿತಗೊಳ್ಳುವಂತಾಯಿತು. ಯುದ್ಧ ಆರಂಭಗೊಂಡು ಎರಡೂವರೆ ವರ್ಷಗಳ ಬಳಿಕ, ಕದನ ಸಣ್ಣ ಗ್ರಾಮಗಳು, ಪಟ್ಟಣಗಳಿಗೆ ಸೀಮಿತವಾಗಿದ್ದು, ಬಹುತೇಕ ನಿಂತ ನೀರಿನಂತಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ಪ್ರಮುಖ ಎದುರಾಳಿಯಾಗಿರುವ ಚೀನಾ 2016ರ ಫೆಬ್ರವರಿಯಿಂದ ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ಸ್ ಹೊಂದಿದೆ. ಆದರೆ ಭಾರತೀಯ ಮಿಲಿಟರಿ ಮತ್ತು ಸರ್ಕಾರ ಇಂದಿಗೂ ಇಂತಹ ಸುಧಾರಣೆಗಳ ಕುರಿತು ಚರ್ಚೆ ನಡೆಸುತ್ತಾ ಕುಳಿತಿವೆ.

ಕೇವಲ ಒಂದು ತಿಂಗಳ ಹಿಂದೆ, ಭಾರತ ಸರ್ಕಾರ ಸೇನೆಗೆ ಸೂಚನೆ ನೀಡುತ್ತಾ, ನೂತನ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಥಿಯೇಟರ್ ಕಮಾಂಡ್ಸ್ ಸ್ಥಾಪಿಸಲು ನಿರ್ದೇಶಿಸಿತ್ತು. ಈ ಸುಧಾರಣೆ, ಸ್ವಾತಂತ್ರ್ಯಾನಂತರದ ಅತಿದೊಡ್ಡ ಸೇನಾ ಸುಧಾರಣೆಯಾಗಲಿದೆ. ನೂತನ ಸರ್ಕಾರ ವಿಳಂಬ ಉಂಟಾಗದಂತೆ ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ಸ್ ಸ್ಥಾಪಿಸಬೇಕಿದೆ.

2. ಅಗ್ನಿವೀರ್ ಯೋಜನೆಯ ಪರಿಷ್ಕರಣೆ

2022ರಲ್ಲಿ ಪರಿಚಯಿಸಲಾದ ಅಗ್ನಿವೀರ್ ಯೋಜನೆ ಆರಂಭದಿಂದಲೂ ನಿರಂತರವಾಗಿ ಟೀಕೆಗೊಳಗಾಗಿದ್ದು, ಯುವಜನತೆಯಲ್ಲಿ ನಿರಾಸೆ ಮೂಡಿಸಿದೆ.

ಅಗ್ನಿವೀರ್ ಯೋಜನೆ ಜಾರಿಗೆ ಬಂದ ಬಳಿಕ, ಉತ್ತರ ಪ್ರದೇಶ ಮತ್ತು ಬಿಹಾರದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕೇವಲ 25% ಅಗ್ನಿವೀರರನ್ನು ಮಾತ್ರವೇ ನಾಲ್ಕು ವರ್ಷಗಳ ಸೇವಾವಧಿಯ ಬಳಿಕ ಸೇನೆಯಲ್ಲಿ ಉಳಿಸಿಕೊಳ್ಳುವುದು ಸೇರಿದಂತೆ, ವಿವಿಧ ಅಂಶಗಳ ಕುರಿತು ಬಹಳಷ್ಟು ಯುವಕರು ಅಸಮಾಧಾನ ಹೊಂದಿದ್ದಾರೆ. ಅದರೊಡನೆ, ಅಗ್ನಿವೀರರ ತರಬೇತಿ ಅವಧಿ ಕೇವಲ ಒಂಬತ್ತು ತಿಂಗಳದ್ದಾಗಿದ್ದು, ಹಲವು ನಿವೃತ್ತ ಅಧಿಕಾರಿಗಳು ಯೋಧರಿಗೆ ಶಿಸ್ತಿನಿಂದ ಸಂಪೂರ್ಣ ತರಬೇತಿ ನೀಡಲು ಈ ಅವಧಿ ಸಾಕಾಗುವುದಿಲ್ಲ ಎಂದಿದ್ದಾರೆ.

ಅಗ್ನಿವೀರ್ ಯೋಜನೆಯ ಮುಖ್ಯ ಉದ್ದೇಶ ರಕ್ಷಣಾ ಬಜೆಟ್ ಮೇಲಿನ ನಿವೃತ್ತಿ ವೇತನದ ಹೊರೆಯನ್ನು ತಗ್ಗಿಸುವುದಾಗಿತ್ತು. ಭಾರತೀಯ ಸೇನಾ ಪಿಂಚಣಿಯ ಪ್ರಮಾಣ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಉಪಕರಣಗಳ ಆಧುನೀಕರಣಕ್ಕೆ, ಆಯುಧಗಳ ಖರೀದಿಗೆ ಹೆಚ್ಚಿನ ಹಣ ಉಳಿಯುವುದಿಲ್ಲ.

ವರದಿಗಳ ಪ್ರಕಾರ, ಅಗ್ನಿವೀರ್ ಯೋಜನೆ ಜಾರಿಗೆ ಬಂದ ಎರಡು ವರ್ಷಗಳ ಬಳಿಕವೂ ಯುವಜನತೆಯಲ್ಲಿ ಅಸಮಾಧಾನ ಮುಂದುವರಿದಿದೆ. ಈ ಅಸಮಾಧಾನವೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರದರ್ಶನದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಗಳಿವೆ.

ಬಿಜೆಪಿಯ ಮಿತ್ರಪಕ್ಷವಾದ ಜೆಡಿಯು, ಅಗ್ನಿವೀರ್ ಯೋಜನೆಯ ಕುರಿತ ಕಳವಳಗಳನ್ನು ನಿವಾರಿಸಲು ಕೆಲವು ಬದಲಾವಣೆಗಳನ್ನು ತರಬೇಕು ಎಂದು ಅಭಿಪ್ರಾಯ ಪಟ್ಟಿದೆ.

ಆರಂಭಿಕ ಹಂತದಲ್ಲಿ ಯಾವ ಸುಧಾರಣೆಗಳೂ ಪರಿಪೂರ್ಣ ಎನಿಸುವುದಿಲ್ಲ. ಅದೇ ರೀತಿ, ಹೊಸ ಯೋಜನೆಯಾದ ಅಗ್ನಿವೀರ್‌ನಲ್ಲೂ ಕಾಲಕ್ರಮೇಣ ಬದಲಾವಣೆಗಳನ್ನು ತರುವ ಅಗತ್ಯವಿದೆ. ಇಂತಹ ಸುಧಾರಣೆಗಳು ಸದ್ಯದಲ್ಲೇ ನಡೆಯುವ ಸಾಧ್ಯತೆಗಳಿವೆ.

ಭಾರತೀಯ ಸೇನೆ ಅಗ್ನಿವೀರ್ ಯೋಜನೆಯಲ್ಲಿ ಸುಧಾರಣೆ ತರಲು ಅವಶ್ಯಕ ಸಲಹೆಗಳನ್ನು ಕಲೆಹಾಕುತ್ತಿದೆ. ಹಿಂದಿನ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ರಾಜನಾಥ್ ಸಿಂಗ್ ಅವರು ಸರ್ಕಾರ ಯೋಜನೆಯಲ್ಲಿ ಸುಧಾರಣೆಗಳನ್ನು ತರಲು ಸಿದ್ಧವಾಗಿದೆ ಎಂದಿದ್ದರು.

3. ನಿಲುಗಡೆಯಾದ ಯೋಜನೆಗಳನ್ನು ಪೂರ್ಣಗೊಳಿಸುವುದು

ಚುನಾವಣೆಯ ಕಾರಣದಿಂದಾಗಿ ಹಲವಾರು ಪ್ರಮುಖ ಯೋಜನೆಗಳು ಸ್ಥಗಿತಗೊಂಡಿದ್ದವು. ಇವುಗಳಲ್ಲಿ, ತೇಜಸ್ ಎಂಕೆ-2 ಯುದ್ಧ ವಿಮಾನಕ್ಕೆ ಅವಶ್ಯಕವಾದ ಜನರಲ್ ಇಲೆಕ್ಟ್ರಿಕ್ ಎಫ್414 ಇಂಜಿನ್ನಿನ ತಂತ್ರಜ್ಞಾನ ವರ್ಗಾವಣೆ (ಟ್ರಾನ್ಸ್‌ಫರ್ ಆಫ್ ಟೆಕ್ನಾಲಜಿ - ಟಿಒಟಿ) ಹಾಗೂ ಎಎಂಸಿಎ ಎಂಕೆ-2 ಯುದ್ಧ ವಿಮಾನಕ್ಕಾಗಿ ಮುಂದಿನ ತಲೆಮಾರಿನ ಹೈ ಥ್ರಸ್ಟ್ (110 ಕೆಎನ್) ಇಂಜಿನ್ ಆಯ್ಕೆ ಮುಖ್ಯವಾಗಿವೆ.

ಭಾರತೀಯ ವಾಯುಬಲದ ಭವಿಷ್ಯಕ್ಕಾಗಿ ಇವೆರಡು ಜೆಟ್ ಇಂಜಿನ್ ಯೋಜನೆಗಳು ಮಹತ್ವದ್ದಾಗಿವೆ. ಇದರ ನಿರ್ಣಯದಲ್ಲಿ ಒಂದು ವರ್ಷದ ವಿಳಂಬವೂ ಈಗಾಗಲೇ ತಡವಾಗಿರುವ ತೇಜಸ್ ಎಂಕೆ-2 ಮತ್ತು ಎಎಂಸಿಎ ಯೋಜನೆಗಳನ್ನು ಇನ್ನಷ್ಟು ತಡವಾಗಿಸಲಿದೆ.

ಅದರೊಡನೆ, ಭಾರತೀಯ ವಾಯು ಸೇನೆಗೆ ಬೇಕಾದ 97 ತೇಜಸ್ ಎಂಕೆ-1ಎ ಯುದ್ಧ ವಿಮಾನಗಳ ಖರೀದಿ ಒಪ್ಪಂದ, 307 ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ಎಟಿಎಜಿಎಸ್) 155 ಎಂಎಂ ಆರ್ಟಿಲರಿ ಗನ್‌ಗಳು ಮತ್ತು ಕೆ-9 ವಜ್ರ-ಟಿ 155 ಎಂಎಂ ಸ್ವಯಂಚಾಲಿತ ಹವಿಟ್ಜರ್ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಬೇಕಿದೆ.

ಭಾರತ ತನ್ನ ಸೇನೆಯ ಮೂರೂ ವಿಭಾಗಗಳಿಗೆ ಅವಶ್ಯಕವಾದ ಎಂಕ್ಯು-9ಬಿ ಗಾರ್ಡಿಯನ್ ಡ್ರೋನ್‌ಗಳ ಖರೀದಿಗೆ 4 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಜಾರಿಯಾಗಬೇಕು. ಈಗಾಗಲೇ ಒಂದು ತಂಡ ಭಾರತಕ್ಕೆ ಆಗಮಿಸಿ, ಡ್ರೋನ್ ಖರೀದಿ ಒಪ್ಪಂದದ ಅಂತಿಮಗೊಳಿಸುವಿಕೆಗೆ ಮಾತುಕತೆ ನಡೆಸುತ್ತಿದೆ. ಫ್ರಾನ್ಸ್‌ನಿಂದ ಆಗಮಿಸಿರುವ ಇನ್ನೊಂದು ತಂಡ, ಭಾರತೀಯ ನೌಕಾ ಸೇನೆಗೆ 26 ರಫೇಲ್ ಎಂ ಯುದ್ಧವಿಮಾನಗಳ ಖರೀದಿಗೆ ದರ ನಿಗದಿಪಡಿಸಲು ಮಾತುಕತೆ ನಡೆಸುತ್ತಿದೆ. ಇವೆರಡೂ ಒಪ್ಪಂದಗಳನ್ನು ತುರ್ತಾಗಿ ಅಂತಿಮಗೊಳಿಸಬೇಕು.

ಭಾರತೀಯ ನೌಕಾಪಡೆಗೆ ಐಎನ್ಎಸ್ ವಿಕ್ರಾಂತ್ ರೀತಿಯ ಮೂರನೇ ವಿಮಾನವಾಹಕ ನೌಕೆಗೆ ಅನುಮೋದನೆ ಸಿಗಬೇಕು. ಆಗ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) ಮರಳಿ ಕಾರ್ಯಾರಂಭಗೊಳಿಸಿ, ಐಎನ್ಎಸ್ ವಿಕ್ರಾಂತ್ ನಿರ್ಮಾಣದ ಮೂಲಕ ಗಳಿಸಿರುವ ಅನುಭವ ಮತ್ತು ಪ್ರಾವೀಣ್ಯತೆಯನ್ನು ಬಳಸಿಕೊಳ್ಳಲಿದೆ.

ಸಣ್ಣಪುಟ್ಟ ಖರೀದಿ ಆದೇಶ ನೀಡುವ ಬದಲಿಗೆ, ಸರ್ಕಾರ ಮಿಲಿಟರಿ ಉಪಕರಣಗಳ ಖರೀದಿಗೆ ದೊಡ್ಡ ಪ್ರಮಾಣದ ಒಪ್ಪಂದಗಳಿಗೆ ಸಹಿ ಹಾಕಬೇಕು. ಇದರಲ್ಲಿ ನಾಗ್ ಮತ್ತು ಹೆಲಿನಾ ಆ್ಯಂಟಿ ಟ್ಯಾಂಕ್ ನಿರ್ದೇಶಿತ ಕ್ಷಿಪಣಿಗಳು, ಮ್ಯಾನ್ ಪೋರ್ಟೇಬಲ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ಸ್ (ಎಂಪಿಎಟಿಜಿಎಂ), ರುದ್ರಮ್-1 ಆ್ಯಂಟಿ ರೇಡಿಯೇಶನ್ ಕ್ಷಿಪಣಿಗಳು, ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ಗಳು (ಎಲ್‌ಯುಎಚ್), ಹಾಗೂ ಹೈ ಸ್ಪೀಡ್ ಲೋ ಡ್ರ್ಯಾಗ್ (ಎಚ್ಎಸ್ಎಲ್‌ಡಿ) ಬಾಂಬ್‌ಗಳ ಖರೀದಿ ಸೇರಿವೆ.

ಭಾರತ 2023ರಲ್ಲಿ ರಚಿಸಿದ್ದ ರಾಕೆಟ್ ದಳವನ್ನೂ ಶೀಘ್ರವಾಗಿ ಜಾರಿಗೊಳಿಸಬೇಕು. ಚೀನಾ ಈಗಾಗಲೇ ಭಾರತದ ವಿರುದ್ಧ ಸಣ್ಣ, ಮಧ್ಯಮ ಮತ್ತು ದೀರ್ಘ ವ್ಯಾಪ್ತಿಯ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಮೇಲುಗೈ ಹೊಂದಿದ್ದು, ಭಾರತ ಕೇವಲ 370 ಸಣ್ಣ ಮತ್ತು ಮಧ್ಯಮ ವ್ಯಾಪ್ತಿಯ ಪ್ರಳಯ್ ಕ್ಷಿಪಣಿಗಳಿಗೆ ಆದೇಶ ಸಲ್ಲಿಸಿದೆ. ಚೀನಾ ಜೊತೆಗಿನ ಅಂತರವನ್ನು ಸರಿದೂಗಿಸಲು ಭಾರತ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು.

ರಷ್ಯನ್ ಸೇನೆ ಅವ್ಯಾಹತವಾಗಿ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿರುವುದರಿಂದ, ಭಾರತ ತಾನು ಖರೀದಿಸಲು ಉದ್ದೇಶಿಸಿರುವ ಪ್ರಳಯ್ ಕ್ಷಿಪಣಿಗಳ ಸಂಖ್ಯೆಯನ್ನು ಕನಿಷ್ಠ ಕೆಲವು ಸಾವಿರಕ್ಕೆ ಹೆಚ್ಚಿಸಬೇಕಿದೆ. ಅದೇ ರೀತಿ, ನಿರ್ಭಯ್ ಕ್ಷಿಪಣಿಗಳು ಮತ್ತು ಅದರ ಆವೃತ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಬೇಕು. ಸೇನೆಯ ಆರ್ಟಿಲರಿ ರೆಜಿಮೆಂಟ್‌ಗಳಿಗೆ ಪಿನಾಕಾ ನಿರ್ದೇಶಿತ ಕ್ಷಿಪಣಿಗಳನ್ನು ಸೇರಿಸಬೇಕು.

4. ಡಿಆರ್‌ಡಿಓ ಪರಿಷ್ಕರಣೆ

ಕಳೆದ ವರ್ಷ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಓ) ಅವಶ್ಯಕ ಸುಧಾರಣೆಗಳನ್ನು ಸೂಚಿಸಲು ಭಾರತ ಸರ್ಕಾರ ಮಾಜಿ ಮುಖ್ಯ ವೈಜ್ಞಾನಿಕ ಸಲಹೆಗಾರ ಪ್ರೊ. ವಿಜಯ್ ರಾಘವನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ಸ್ಥಾಪಿಸಿತು. ಈ ಸಮಿತಿ ಅದೇ ವರ್ಷದಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿತು. ಸುದೀರ್ಘ ಕಾಲದಿಂದಲೂ ಬಾಕಿ ಉಳಿದಿರುವ ಈ ಸುಧಾರಣೆಗಳನ್ನು ಸರ್ಕಾರ ಕ್ಷಿಪ್ರವಾಗಿ ಜಾರಿಗೊಳಿಸಬೇಕು.

ಅದೃಷ್ಟವಶಾತ್, ಡಿಆರ್‌ಡಿಓದ ಒಳಗಿರುವ ಆಂತರಿಕ ಅನುಮಾನಗಳನ್ನು ಲೆಕ್ಕಿಸದೆ, ಭಾರತ ಸರ್ಕಾರ ಕೇವಲ ಎರಡು ವಾರಗಳ ಹಿಂದೆ, ಅಂದರೆ ಮೇ 22ರಂದು ಈ ಸುಧಾರಣೆಗಳನ್ನು ಜಾರಿಗೆ ತರಲು ಆರಂಭಿಸಿ, ಆಗಸ್ಟ್ 31ರೊಳಗೆ ಪೂರ್ಣಗೊಳಿಸಲು ಆದೇಶಿಸಿದೆ.

ಆದರೆ,‌ ಅಗ್ನಿವೀರ್ ಯೋಜನೆಯ ರೀತಿಯಲ್ಲಿ ಯಾವುದೇ ಸುಧಾರಣೆಗಳ ಆರಂಭಿಕ ಆವೃತ್ತಿಯೂ ಪರಿಪೂರ್ಣವಾಗಿರುವುದಿಲ್ಲ. ನೂತನ ಸರ್ಕಾರ ಅವಶ್ಯಕ ಬದಲಾವಣೆಗಳು ಮತ್ತು ರಚನಾತ್ಮಕ ಅಭಿಪ್ರಾಯಗಳಿಗೆ ಕಿವಿಗೊಟ್ಟು, ಸುಧಾರಣೆಗಳನ್ನು ಇನ್ನಷ್ಟು ಉತ್ತಮಪಡಿಸಬೇಕು.

5. ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ

ಈಗಾಗಲೇ ಇರುವ ರಕ್ಷಣಾ ವ್ಯವಸ್ಥೆಗಳ ಸಮಗ್ರ ಸುಧಾರಣೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಸೇನಾಪಡೆಗಳಿಗೆ ಅತ್ಯವಶ್ಯಕವಾಗಿದೆ. ಅದರೊಡನೆ, ಸಮರ್ಪಕವಾದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು (ನ್ಯಾಷನಲ್ ಸೆಕ್ಯುರಿಟಿ ಸ್ಟ್ರಾಟೆಜಿ - ಎನ್ಎಸ್ಎಸ್) ಹೊಂದುವುದು ಅಷ್ಟೇ ಮುಖ್ಯವಾಗಿದೆ.

ಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಪ್ರಮುಖ ನೀತಿಗಳು, ಭವಿಷ್ಯದ ಯೋಜನೆಗಳು ಮತ್ತು ರಕ್ಷಣಾ ಖರೀದಿಗಳು ಭದ್ರತಾ ನೀತಿಯ ಮೇಲೆ ಆಧಾರಿತವಾಗಿರುತ್ತವೆ. ರಾಷ್ಟ್ರೀಯ ಭದ್ರತಾ ನೀತಿ ಮುಂದಿನ 10-15 ವರ್ಷಗಳ ಅವಧಿಯ ರಕ್ಷಣಾ ಗುರಿಗಳನ್ನು ವಿವರಿಸುತ್ತದೆ.

ಉದಾಹರಣೆಗೆ, ಒಂದು ವೇಳೆ ಭಾರತ ಚೀನಾವನ್ನು ಕೇವಲ ತನ್ನ ಗಡಿಯೊಳಗೆ ಲಡಾಖ್ ಮತ್ತು ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ (ಐಒಆರ್) ಚೀನಾವನ್ನು ಎದುರಿಸಲು ಸಿದ್ಧತೆ ನಡೆಸಿದರೆ, ಅದರ ಬಜೆಟ್ ಮತ್ತು ಯೋಜನೆ ಚೀನಾವನ್ನು ದಕ್ಷಿಣ ಚೀನಾ ಸಮುದ್ರದಲ್ಲಿ (ಎಸ್‌ಸಿಎಸ್), ಎರಡನೇ ದ್ವೀಪ ಸರಣಿಯ ಬಳಿ, ಮತ್ತು ದೆಪ್‌ಸಂಗ್ ಬಯಲಿನ ಒಳಗಿನ ಕಾರಕೋರಂ ಪರ್ವತಗಳಾಚೆ ಟಿಬೆಟ್‌ನಲ್ಲಿ ಎದುರಿಸಲು ಬೇಕಾದ ಬಜೆಟ್ ಮತ್ತು ಯೋಜನೆಗಳಿಗಿಂತ ಭಿನ್ನವಾಗಿರಲಿದೆ.

ವಾರದ ಹಿಂದೆ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು "ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ (ಎನ್ಎಸ್ಎಸ್) ಗೈರಾಗಿದ್ದ ಮಾತ್ರಕ್ಕೆ ಭಾರತದ ಬಳಿ ಯಾವುದೇ ಕಾರ್ಯತಂತ್ರ ಇಲ್ಲ ಎಂದರ್ಥವಲ್ಲ. ಬಹಳಷ್ಟು ಜನ ಎನ್ಎಸ್ಎಸ್ ಮೇಲೆ ಯಾಕೆ ಇಷ್ಟೊಂದು ಒತ್ತು ನೀಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ" ಎಂದಿದ್ದರು. ಆದರೆ ಅವರ ಮಾತುಗಳು ರಕ್ಷಣಾ ವಿಚಾರದಲ್ಲಿ ಅಷ್ಟೊಂದು ವಿಶ್ವಾಸದಾಯಕವಾಗಿಲ್ಲ.

ಇದು ಒಂದು ರೀತಿ ಸುಧಾರಣೆಗಳಿಗೆ ತೆರೆದಿರದ ಸೇನೆಯ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ನೂತನ ಸರ್ಕಾರ ಈ ವಿಚಾರಗಳನ್ನು ಸೂಕ್ತವಾಗಿ ನಿಭಾಯಿಸಿ, ಸಮಗ್ರ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ರಚಿಸಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT