ನವದೆಹಲಿ: ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಮಿತ್ರಪಕ್ಷಗಳ ಬೆಂಬಲದೊಂದಿಗೆ ರಚನೆಯಾದ ಬೆನ್ನಲ್ಲೇ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.
ಮೋದಿ ನೇತೃತ್ವದ ಸರ್ಕಾರಕ್ಕೆ ಸಂದೇಶ ರವಾನೆ ಮಾಡಿರುವ ಮೋಹನ್ ಭಾಗ್ವತ್, ಮಣಿಪುರದ ಹಿಂಸಾಚಾರ ವಿಷಯವನ್ನು ಆದ್ಯತೆಯನ್ನಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದ್ದಾರೆ.
ಆರ್ ಎಸ್ಎಸ್ ಕೇಂದ್ರ ಕಚೇರಿ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಮೋಹನ್ ಭಾಗ್ವತ್, ಮಣಿಪುರ ಶಾಂತಿಗಾಗಿ ಒಂದು ವರ್ಷದಿಂದ ಎದುರು ನೋಡುತ್ತಿದೆ. ಆದ್ಯತೆಯ ಮೇರೆಗೆ ಅಲ್ಲಿನ ಹಿಂಸಾಚಾರವನ್ನು ಕೊನೆಗಾಣಿಸಲು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.
10 ವರ್ಷಗಳಿಂದ ಮಣಿಪುರ ಶಾಂತಿಯುತವಾಗಿತ್ತು. ಆದರೆ ಏಕಾಏಕಿ ಗನ್ ಸಂಸ್ಕೃತಿ ಮರಳಿ ಬಂದು ವಿಜೃಂಭಿಸಲು ಆರಂಭಿಸಿತು. ಚುನಾವಣೆಯ ಗುಂಗಿನಿಂದ ಹೊರಬಂದು ಈಗ ದೇಶ ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಸರ್ಕಾರ ಹಾಗೂ ವಿಪಕ್ಷಗಳೆರಡಕ್ಕೂ ಭಾಗ್ವತ್ ಸಲಹೆ ನೀಡಿದ್ದಾರೆ.
"ನಿಜವಾದ 'ಸೇವಕ' ತನ್ನ ಕೆಲಸವನ್ನು ಸಜ್ಜನಿಕೆಯನ್ನು ಕಾಪಾಡಿಕೊಳ್ಳುವ ಮೂಲಕ ಮಾಡುತ್ತಾನೆ. ಕೆಲಸ ಮಾಡುವಾಗ ಔಚಿತ್ಯವನ್ನು ಅನುಸರಿಸುತ್ತಾರೆ. ನಾನು ಇದನ್ನು ಮಾಡಿದ್ದೇನೆ ಎಂದು ಆತ ಅಹಂಕಾರ ಹೊಂದುವುದಿಲ್ಲ. ಆ ವ್ಯಕ್ತಿಯನ್ನು ಮಾತ್ರ ನಿಜವಾದ 'ಸೇವಕ' ಎಂದು ಕರೆಯಬಹುದು" ಎಂದು ಇದೇ ಕಾರ್ಯಕ್ರಮದಲ್ಲಿ ಭಾಗ್ವತ್ ಹೇಳಿರುವುದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಜೂ.10 ರಂದು (ಸೋಮವಾರ) ಮುಂಜಾನೆ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಭೇಟಿಯ ಸಿದ್ಧತೆಗಾಗಿ ಜಿರಿಬಾಮ್‌ಗೆ ತೆರಳಿದ್ದ ಮಣಿಪುರ ಪೊಲೀಸರ ಭದ್ರತಾ ತಂಡ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳ ದಾಳಿಗೆ ಒಳಗಾಗಿತ್ತು. ಘಟನೆಯಲ್ಲಿ ವಾಹನದ ಚಾಲಕ ಸೇರಿದಂತೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಸಿಂಗ್ ಮಂಗಳವಾರ ಹಿಂಸಾಚಾರ ಪೀಡಿತ ಪಟ್ಟಣಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಕಳೆದ ವರ್ಷ ಮೇ 3 ರಂದು ಉಗ್ರಗಾಮಿಗಳ ಬೆಂಬಲದೊಂದಿಗೆ ಕುಕಿ ಜನರು ಮೈತೇಯ್ ಗ್ರಾಮಗಳ ಮೇಲೆ ದಾಳಿ ನಡೆಸಿದ ದಿನ ಮೈತೇ-ಕುಕಿ ಸಂಘರ್ಷ ಭುಗಿಲೆದ್ದಿತ್ತು.
ಶನಿವಾರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರು ಇಲ್ಲಿನ ಮಣಿಪುರ ಭವನದಲ್ಲಿ ಸಿಎಂ ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿ ಜಿರಿಬಾಮ್ ಜಿಲ್ಲೆಯ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಅವಲೋಕಿಸಿದರು, ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂಗೆ ಸಲಹೆ ನೀಡಿದ್ದಾರೆ.