ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋತ ಮೂವರು ಮಾಜಿ ಸಚಿವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಸಂಸತ್ತಿನ ಮೇಲ್ಮನೆಗೆ ಸಂಭಾವ್ಯ ನಾಮನಿರ್ದೇಶಿತರಲ್ಲಿ ಸ್ಮೃತಿ ಇರಾನಿ, ಅರ್ಜುನ್ ಮುಂಡಾ ಮತ್ತು ಆರ್‌ಕೆ ಸಿಂಗ್ ಇದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇವರೆಲ್ಲರೂ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಲ್ಲಿ ವಿಫಲರಾಗಿದ್ದರು.
ಕೆಲವರು ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ರಾಜ್ಯಸಭೆಯಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ. ಅಸ್ಸಾಂ, ಬಿಹಾರ, ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತ್ರಿಪುರಾದಲ್ಲಿ ಖಾಲಿ ಇರುವ ರಾಜ್ಯಸಭೆ ಸ್ಥಾನಗಳ ಕುರಿತು ರಾಜ್ಯಸಭಾ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.
ಹಲವು ರಾಜ್ಯಸಭಾ ಸಂಸದರು ಲೋಕಸಭೆಗೆ ವರ್ಗಾವಣೆಯಾಗಿರುವುದರಿಂದ ರಾಜ್ಯಸಭೆಯಲ್ಲಿ ಅನೇಕ ಸ್ಥಾನಗಳು ಖಾಲಿಯಾಗಿವೆ. ಅಸ್ಸಾಂನಿಂದ ಸರ್ಬಾನಂದ ಸೋನೋವಾಲ್, ಬಿಹಾರದಿಂದ ವಿವೇಕ್ ಠಾಕೂರ್, ಮಧ್ಯಪ್ರದೇಶದಿಂದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪಿಯೂಷ್ ಗೋಯಲ್ ಸೇರಿದಂತೆ ಕೆಲ ಬಿಜೆಪಿ ರಾಜ್ಯಸಭಾ ಸದಸ್ಯರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋತವರನ್ನು ಬಿಜೆಪಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಎಲ್ ಶರ್ಮಾ ಅವರಿಂದ ಸೋತ ಸ್ಮೃತಿ ಇರಾನಿ, ಜಾರ್ಖಂಡ್ ನ ಕುಂತಿ ಕ್ಷೇತ್ರದಲ್ಲಿ ಸೋಲನ್ನುಭವಿಸಿದ ಅರ್ಜುನ್ ಮುಂಡಾ ಮತ್ತು ಬಿಹಾರದ ಅರ್ರಾ ಲೋಕಸಭೆ ಕ್ಷೇತ್ರದಲ್ಲಿ ಸಿಪಿಐ ಎಂ ಅಭ್ಯರ್ಥಿಯಿಂದ ಸೋಲಿಗೆ ಶರಣಾದ ಮಾಜಿ ಸಚಿವ ಆರ್ ಕೆ. ಸಿಂಗ್ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಸಚಿವರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.