
ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಪ್ರಧಾನಿ ಮೋದಿ ಪ್ರಮಾಣ ವಚನ ಹಾಗೂ ಕೇಂದ್ರ ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಮೋದಿ ಸಂಪುಟದಿಂದ ಮಾಜಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಅವರಿಗೆ ಕೊಕ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪಟ್ಟಿಯಿಂದ ಮಾಜಿ ಸಚಿವರಾದ ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್ ಹಾಗೂ ಅನುರಾಗ್ ಠಾಕೂರ್ ಅವರ ಹೆಸರನ್ನು ಬಿಜೆಪಿ ಕೈಬಿಟ್ಟಿದೆ ಎಂದು ವರದಿಯಾಗಿದೆ.
ಹಿಮಾಚಲ ಪ್ರದೇಶದ ಹಮೀರ್‌ಪುರ ಕ್ಷೇತ್ರದಿಂದ ಮತ್ತೊಮ್ಮೆ ಗೆದ್ದಿರುವ ಅನುರಾಗ್ ಠಾಕೂರ್, ಈ ಹಿಂದಿನ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ನಿಭಾಯಿಸಿದ್ದರು. ಮೋದಿ ಅವರನ್ನು ಭೇಟಿ ಮಾಡಲು ಆಹ್ವಾನಿಸಿದ ನಾಯಕರ ಪಟ್ಟಿಯಲ್ಲಿ ಇವರ ಹೆಸರಿರಲಿಲ್ಲ.
ಅಂತೆಯೇ ಅಮೇಥಿಯಲ್ಲಿ ದೊಡ್ಡ ಸೋಲು ಅನುಭವಿಸಿದ ನಿರ್ಗಮಿತ ಸಚಿವರಾದ ಸ್ಮೃತಿ ಇರಾನಿ ಕೂಡ ಈ ಬಾರಿ ಸರ್ಕಾರದ ಭಾಗವಾಗಿಲ್ಲ. ರಜಪೂತ ಸಮುದಾಯದ ಬಗ್ಗೆ ಮಾಡಿದ್ದ ಟೀಕೆಯ ವಿಚಾರವಾಗಿ ಸ್ಮೃತಿ ಇರಾನಿ ವ್ಯಾಪಕ ವಿರೋಧ ಎದುರಿಸಿದ್ದರು.
ಇವರಿಬ್ಬರ ಬದಲು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಶಂತನು ಠಾಕೂರ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಶಂತನು ಠಾಕೂರ್ ಅವರು ನರೇಂದ್ರ ಮೋದಿ ಅವರ ಹಿಂದಿನ ಸರಕಾರದಲ್ಲಿ ಬಂದರು, ಸರಕು ಸಾಗಣೆ ಹಾಗೂ ಜಲಮಾರ್ಗ ಖಾತೆಗಳ ರಾಜ್ಯ ಸಚಿವರಾಗಿದ್ದರು. ಪಶ್ಚಿಮ ಬಂಗಾಳದಿಂದ ಗೆಲುವು ಸಾಧಿಸಿರುವ 12 ಮಂದಿ ಸಂಸದರ ಪೈಕಿ ಶಂತನು ಠಾಕೂರ್ ಕೂಡಾ ಒಬ್ಬರಾಗಿದ್ದಾರೆ.
ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್ ಅವರು ಹಾಲಿ ಸಂಭಾವ್ಯ ಸಚಿವ ಸಂಪುಟದ ಭಾಗವಾಗಲಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೆ ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್ ಮತ್ತು ಹರ್ದೀಪ್ ಸಿಂಗ್ ಪುರಿ ಕೂಡ ಹೊಸ ಸರ್ಕಾರದ ಸಂಪುಟದ ಭಾಗವಾಗಲಿದ್ದಾರೆ ಎಂದು ಹೇಳಲಾಗಿದೆ.
ರಾಜೀವ್ ಚಂದ್ರಶೇಖರ್ ಗೂ ಕೊಕ್
ಇದೇ ವೇಳೆ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ತೀವ್ರ ಪೈಪೋಟಿ ನಡೆಸಿ ಸೋತಿದ್ದ ರಾಜೀವ್ ಚಂದ್ರಶೇಖರ್ ಕೂಡ ಹೊಸ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಆದಾಗ್ಯೂ, ಅಧಿಕೃತ ಮೂಲಗಳು ಹಂಚಿಕೊಂಡಿರುವ ಮಾಹಿತಿ ಅನ್ವಯ ಈ ಹಿಂದಿನ ಸರ್ಕಾರದಲ್ಲಿದ್ದ ಬಹುತೇಕ ಮಂತ್ರಿಗಳು ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.
Advertisement