ಕೊಚ್ಚಿ: ಕುವೈತ್ ಮಂಗಾಫ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಬಲಿಯಾದ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆ ವಿಮಾನ(IAF) ವಿಮಾನ ಶುಕ್ರವಾರ ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ನೆಡುಂಬಸ್ಸೆರಿಯಲ್ಲಿರುವ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಮದು ಕಾರ್ಗೋ ಟರ್ಮಿನಲ್ ಹೊರಗೆ ಸುಮಾರು 35 ಆಂಬ್ಯುಲೆನ್ಸ್‌ಗಳು ಮತ್ತು ಸರಿಸುಮಾರು ಅಷ್ಟೇ ಸಂಖ್ಯೆಯ ಪೊಲೀಸ್ ವಾಹನಗಳು ಸಾಲುಗಟ್ಟಿ ನಿಂತಿದ್ದವು, ಕುವೈತ್‌ನ ಕಟ್ಟಡವೊಂದರಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಸತ್ತವರ ಪಾರ್ಥಿವ ಶರೀರವನ್ನು ಸ್ವೀಕರಿಸಲು ನಿಕಟ ಬಂಧುಗಳು, ಕುಟುಂಬಸ್ಥರು ಮತ್ತು ಆತ್ಮೀಯರು ಕಾಯುತ್ತಿದ್ದರು.
ಕುವೈತ್‌ನಲ್ಲಿ ಮೊನ್ನೆ ಬುಧವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪ್ರಾಣ ಕಳೆದುಕೊಂಡ 23 ಕೇರಳೀಯರ ಕುಟುಂಬಸ್ಥರು ತಾವು ಭರಿಸುವ ದುಃಖದ ಮೂಕ ಸಾಕ್ಷಿಯಲ್ಲಿ ಒಟ್ಟಿಗೆ ಸೇರಿದ್ದರು. ವೇದಿಕೆಯ ಬಳಿ ಕುಟುಂಬಿಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದ್ದು, ಗೌರವ ಸಲ್ಲಿಸಲು ಪೆಟ್ಟಿಗೆಗಳನ್ನು ಇರಿಸಲಾಗಿದೆ. ರಾಜ್ಯ ಸಚಿವರಾದ ಕೆ ರಾಜನ್, ಪಿ ರಾಜೀವ ಮತ್ತು ವೀಣಾ ಜಾರ್ಜ್ ಅವರು ಅಧಿಕಾರಿಗಳೊಂದಿಗೆ ಸಮನ್ವಯ ಮತ್ತು ವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಕೂಡ ಕುಟುಂಬಸ್ಥರನ್ನು ಭೇಟಿ ಮಾಡಿದರು. ಮೃತದೇಹಗಳನ್ನು ಸ್ವೀಕರಿಸಲು ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಸುರೇಶ್ ಗೋಪಿ ಕೂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.