ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರನ್ನು ಬಂಧಿಸಲಾಗಿದ್ದು, ಅವರಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆರೆಯ ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಎಂಟು ನಕ್ಸಲೀಯರು ಮತ್ತು ಪೊಲೀಸ್ ವಿಶೇಷ ಕಾರ್ಯಪಡೆಯ ಯೋಧರೊಬ್ಬರು ಹತರಾದ ಮಾರನೇ ದಿನವೇ ಈ ಬೆಳವಣಿಗೆ ನಡೆದಿದೆ.
ಜಿಲ್ಲಾ ರಿಸರ್ವ್ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಭೈರಮ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯ ಸುರಖದಪಾರಾ-ಕೆಷ್ಟೂಲ್‌ನ ಅರಣ್ಯದ ಬೆಟ್ಟಗಳಲ್ಲಿ ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ನಾಲ್ವರು ನಕ್ಸಲೀಯರನ್ನು ಬಂಧಿಸಲಾಗಿದೆ. ಅವರಿಂದ ಟಿಫಿನ್ ಬಾಂಬ್, ಜಿಲೆಟಿನ್ ಸ್ಟಿಕ್, ಎಲೆಕ್ಟ್ರಿಕ್ ಫ್ಯೂಸ್ ವೈರ್ ಮತ್ತು ಮಾವೋವಾದಿಗಳ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರ ಪೈಕಿ ತಲೆಗೆ 5 ಲಕ್ಷ ರೂಪಾಯಿ ಬಹುಮಾನವನ್ನು ಹೊತ್ತಿದ್ದ ವೆಕ್ಕೊ ಅವರನ್ನು ಬಿರಿಯಾಭೂಮಿ ಗ್ರಾಮದ ಬಳಿಯ ಅರಣ್ಯದಿಂದ ಸ್ಫೋಟಕಗಳ ಸಂಗ್ರಹದೊಂದಿಗೆ ಬಂಧಿಸಲಾಗಿದೆ.ಅವರು ಮಾವೋವಾದಿಗಳ ಮಿರ್ತೂರ್ ಸ್ಥಳೀಯ ಘಟಕದ (LOS) ಕಮಾಂಡರ್ ಆಗಿದ್ದರು ಎಂದು ಅವರು ಹೇಳಿದ್ದಾರೆ.