ಮುಂಬೈ: ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಇಂಡಿಯಾ ಮೈತ್ರಿಕೂಟದ ಎಲ್ಲ ವಿಪಕ್ಷಗಳು ಬೆಂಬಲ ನೀಡಲು ಪ್ರಯತ್ನಿಸುತ್ತವೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಲೋಕಸಭೆಯ ಸ್ಪೀಕರ್ ಆಯ್ಕೆಯು ನಿರ್ಣಾಯಕವಾಗಿದೆ. ಒಂದು ವೇಳೆ ಬಿಜೆಪಿಗೆ ಆ ಸ್ಥಾನ ಸಿಕ್ಕರೆ, ಅದು ಟಿಡಿಪಿ, ಜೆಡಿಯು, ಚಿರಾಗ್ ಪಾಸ್ವಾನ್ ಮತ್ತು ಜಯಂತ್ ಚೌಧರಿ ಅವರ ರಾಜಕೀಯ ಪಕ್ಷಗಳನ್ನು ಒಡೆಯುತ್ತದೆ ಎಂದು ಹೇಳಿದ್ದಾರೆ.
'ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಯಸುತ್ತಿದೆ ಎಂಬುದನ್ನು ನಾನು ಕೇಳಿದ್ದೇನೆ. ಹಾಗೇನಾದರೂ ಆದರೆ, ಇಂಡಿಯಾ ಮೈತ್ರಿಕೂಟ ಈ ಬಗ್ಗೆ ಚರ್ಚಿಸುತ್ತದೆ ಮತ್ತು ಮೈತ್ರಿಕೂಟದ ಎಲ್ಲ ಪಕ್ಷಗಳು ಟಿಡಿಪಿಗೆ ಬೆಂಬಲ ನೀಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ' ಎಂದು ಅವರು ಹೇಳಿದರು.
ತಮ್ಮನ್ನು ಬೆಂಬಲಿಸುವ ಜನರಿಗೆ ದ್ರೋಹ ಬಗೆಯುವುದು ಬಿಜೆಪಿದೆ ಅಭ್ಯಾಸವಾಗಿದ್ದು, ಆ ಅನುಭವ ನಮಗಾಗಿದೆ. ನಿಯಮದ ಪ್ರಕಾರ ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳು ಪಡೆಯಬೇಕು. ಕೇಂದ್ರದಲ್ಲಿ ಸ್ಥಿರ ಸರ್ಕಾರ ಇರುವುದಿಲ್ಲ ಎಂದರು.
ಲೋಕಸಭೆ ಚುನಾವಣೆಯ ನಂತರ ಬಿಜೆಪಿ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಲವು ನಾಯಕರು ಇತ್ತೀಚೆಗೆ ನೀಡಿರುವ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ತನ್ನ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಯಸಿದರೆ ಒಳ್ಳೆಯದು. ಆಗುತ್ತಿರುವ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದೇವೆ ಎಂದು ಅವರು ಹೇಳಿದರು.
ಜೂನ್ 7 ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಸಂಸದೀಯ ಪಕ್ಷ, ಬಿಜೆಪಿ ಸಂಸದೀಯ ಪಕ್ಷ ಮತ್ತು ಲೋಕಸಭೆಯಲ್ಲಿ ಬಿಜೆಪಿ ನಾಯಕರಾಗಿ ಆಯ್ಕೆ ಮಾಡಲಾಯಿತು.
ಮೋದಿ ಅವರನ್ನು ಎನ್‌ಡಿಎ ಸಂಸದೀಯ ಸಭೆಯಲ್ಲಿ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆಯೇ ಹೊರತು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಅಲ್ಲ. ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಲಿಲ್ಲ. ಬಿಜೆಪಿ ಸಂಸದೀಯ ಸಭೆಯಲ್ಲಿ ನಾಯಕತ್ವದ ವಿಚಾರ ಬಂದಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು. ಹಾಗಾಗಿ ಎನ್‌ಡಿಎ ಸಂಸದೀಯ ಸಭೆಯಲ್ಲಿ ಮೋದಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದು ಗಂಭೀರ ವಿಷಯ ಎಂದು ರಾವುತ್ ಹೇಳಿದರು.