ನವದೆಹಲಿ: ಈ ವರ್ಷ ಜೂನ್ ವರೆಗೆ 12,600 ದೂರುಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ(NCW) ಸ್ವೀಕರಿಸಿದೆ ಮತ್ತು ಇದು ಕೇವಲ 6 ತಿಂಗಳಲ್ಲಿ ಎನ್‌ಸಿಡಬ್ಲ್ಯು ಸ್ವೀಕರಿಸಿದ ಅತಿ ಹೆಚ್ಚು ದೂರುಗಳಾಗಿವೆ.
ಅಧಿಕೃತ ಮಾಹಿತಿಯ ಪ್ರಕಾರ ಉತ್ತರ ಪ್ರದೇಶವು ಅತಿ ಹೆಚ್ಚು ದೂರುಗಳನ್ನು ದಾಖಲಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಕೌಟುಂಬಿಕ ಹಿಂಸಾಚಾರವನ್ನು ಹೊರತುಪಡಿಸಿ ಕಿರುಕುಳವನ್ನು ಒಳಗೊಂಡಿರುವ, ಘನತೆಗೆ ಧಕ್ಕೆ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ದೂರುಗಳನ್ನು ಸ್ವೀಕರಿಸಲಾಗಿದೆ.
NCW ಡೇಟಾ ಪ್ರಕಾರ, ಘನತೆಗೆ ಧಕ್ಕೆ ವಿಭಾಗದಲ್ಲಿ 3,107 ದೂರುಗಳು, ನಂತರ 3,544 ಕೌಟುಂಬಿಕ ದೌರ್ಜನ್ಯದ ದೂರುಗಳು ಬಂದಿವೆ. ವರದಕ್ಷಿಣೆ ಕಿರುಕುಳದ ದೂರುಗಳು 1,957, ಕಿರುಕುಳದ ದೂರುಗಳು 817, ಮಹಿಳಾ ದೂರುಗಳ ಬಗ್ಗೆ ಪೊಲೀಸರ ನಿರಾಸಕ್ತಿಗೆ ಸಂಬಂಧಿಸಿದಂತೆ 518 ಮತ್ತು ಅತ್ಯಾಚಾರ ಹಾಗೂ ಅತ್ಯಾಚಾರ ಯತ್ನ ದೂರುಗಳು 657 ರಷ್ಟಿದೆ ಎಂದು ಅಂಕಿಅಂಶಗಳು ತಿಳಿಸಿವೆ.
ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ 493, ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ 339, ಹಿಂಬಾಲಿಸಿದ್ದಕ್ಕೆ 345 ದೂರುಗಳಿವೆ ಎಂದು ಅದು ಹೇಳಿದೆ.
ಅಂಕಿಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೂರುಗಳು ಅಂದರೆ 6,470, ದೆಹಲಿಯಲ್ಲಿ 1,113 ಮತ್ತು ಮಹಾರಾಷ್ಟ್ರದಲ್ಲಿ 762 ದೂರುಗಳು ದಾಖಲಾಗಿವೆ. ಬಿಹಾರದಲ್ಲಿ 584, ಮಧ್ಯಪ್ರದೇಶ 514, ಹರಿಯಾಣ 506, ರಾಜಸ್ಥಾನ 408, ತಮಿಳುನಾಡು 301, ಪಶ್ಚಿಮ ಬಂಗಾಳ 306 ಮತ್ತು ಕರ್ನಾಟಕದಲ್ಲಿ 305 ಪ್ರಕರಣಗಳು ದಾಖಲಾಗಿವೆ.
2023ರಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಒಟ್ಟು 28,811 ದೂರುಗಳನ್ನು ಎನ್‌ಸಿಡಬ್ಲ್ಯು ಸ್ವೀಕರಿಸಿದೆ ಎಂದು ಪಿಟಿಐ ವರದಿ ಮಾಡಿದೆ.