ವಿಜಯವಾಡ: ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಬುಧವಾರ ಇಲ್ಲಿ ವೇದಘೋಷಗಳ ನಡುವೆ ಅಧಿಕಾರ ಸ್ವೀಕರಿಸಿದರು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಪರಿಸರ, ಅರಣ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳನ್ನು ನೀಡಲಾಗಿದೆ.
ಗ್ರಾಮೀಣ ನೀರು ಸರಬರಾಜು ಇಲಾಖೆಯನ್ನು ಪವನ್ ಕಲ್ಯಾಣ್ ಅವರಿಗೆ ನೀಡಲಾಗಿದೆ. ಹಲವಾರು ಜನಸೇನಾ ಮುಖಂಡರು ಮತ್ತು ಇತರರು ಅಧಿಕಾರ ಸ್ವೀಕರಿಸಿದ ಪವನ್ ಕಲ್ಯಾಣ್ ಅವರನ್ನು ಅಭಿನಂದಿಸಿದರು.
ನಂತರ ಉಪ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಪರಿಶೀಲನಾ ಸಭೆ ನಡೆಸುವ ನಿರೀಕ್ಷೆ ಇದೆ.
ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಪೀಠಾಪುರಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಎನ್ ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಎರಡು ಬಾರಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ರಾಜ್ಯ ವಿಭಜನೆಯಾದ ನಂತರ ಈಗ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ.
ರಾಜ್ಯದಲ್ಲಿ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಡಿಎ ಕೂಟವು ಭರ್ಜರಿ ಗೆಲುವು ಸಾಧಿಸಿತ್ತು. ವಿಧಾನಸಭಾ ಚುನಾವಣೆಗಳಲ್ಲಿ 175 ಸ್ಥಾನಗಳ ಪೈಕಿ 164 ಸ್ಥಾನ ಮತ್ತು 25 ಲೋಕಸಭಾ ಸ್ಥಾನಗಳ ಪೈಕಿ 21 ಸ್ಥಾನ ಗೆದ್ದಿತ್ತು.