ಭುವನೇಶ್ವರ: ಒಡಿಶಾ ವಿಧಾನಸಭೆಯ ಸ್ಪೀಕರ್ ಹುದ್ದೆಯ ಚುನಾವಣೆಗೆ ಬಿಜೆಪಿ ಹಿರಿಯ ನಾಯಕಿ ಮತ್ತು ರಾಣ್‌ಪುರ ಶಾಸಕಿ ಸುರಮಾ ಪಾಧಿ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಉಪಮುಖ್ಯಮಂತ್ರಿಗಳಾದ ಕೆ.ವಿ.ಸಿಂಗ್ ದೇವ್ ಹಾಗೂ ಪ್ರವತಿ ಪರಿದಾ ಅವರೊಂದಿಗೆ ಪಾಧಿ ಅವರು ಒಡಿಶಾ ವಿಧಾನಸಭೆ ಕಾರ್ಯದರ್ಶಿ ದಶರಥಿ ಸತ್ಪತಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಬಿಜೆಪಿ ಶಾಸಕಾಂಗ ಪಕ್ಷವು ಸ್ಪೀಕರ್ ಹುದ್ದೆಗೆ ಪಾಧಿ ಅವರ ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ಪಾಧಿ ಅವರ ಉಮೇದುವಾರಿಕೆಯನ್ನು ಬೆಂಬಲಿಸುವಂತೆ ಮುಖ್ಯಮಂತ್ರಿಗಳು, ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರನ್ನು ಕೋರಿದ್ದಾರೆ ಎಂದು ಒಡಿಶಾ ಸಂಸದೀಯ ವ್ಯವಹಾರಗಳ ಸಚಿವ ಮುಖೇಶ್ ಮಹಾಲಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರತಿಪಕ್ಷ ಬಿಜೆಡಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಪಾಧಿ ಅವರು ಸ್ಪೀಕರ್ ಚುನಾವಣೆಗೆ ಸ್ಪರ್ಧಿಸಿರುವ ಏಕೈಕ ಅಭ್ಯರ್ಥಿಯಾಗಿದ್ದಾರೆ ಮತ್ತು ಗುರುವಾರ ಒಡಿಶಾ ವಿಧಾನಸಭೆಯ 17ನೇ ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಬಿಜೆಡಿಯ ಪ್ರಮೀಳಾ ಮಲ್ಲಿಕ್ ಅವರ ನಂತರ ಸುರಮಾ ಪಾಧಿ ಅವರು ರಾಜ್ಯದ ಎರಡನೇ ಮಹಿಳಾ ಸ್ಪೀಕರ್ ಆಗಲಿದ್ದಾರೆ.