ಮುಂಬೈ: ರೀಲ್ಸ್ ಮಾಡುವ ಹುಚ್ಚು ಸಾಹಸಕ್ಕೆ ಮತ್ತೊಂದು ಬಲಿಯಾಗಿದ್ದು, ಬೆಟ್ಟದ ತುದಿಯಲ್ಲಿ ರಿವರ್ಸ್ ಮಾಡುವ ರೀಲ್ಸ್ ಮಾಡುತ್ತಿದ್ದ ವೇಳೆ ಕಾರು ಪ್ರಪಾತಕ್ಕೆ ಉರುಳಿ 23 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ.
ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದ ಸುಲಿಭಂಜನ್ ಬೆಟ್ಟದಲ್ಲಿ ಈ ದುರ್ಘಟನೆ ವರದಿಯಾಗಿದ್ದು, ಕಾರಲ್ಲಿ ಕೂತು ರೀಲ್ಸ್ ಮಾಡುವ ದುಸ್ಸಾಹಸಕ್ಕೆ ಮುಂದಾದ ಯುವತಿ, ಬೃಹತ್ ಪ್ರಪಾತಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಜರುಗಿದೆ.
ಮೃತ ಯುವತಿಯನ್ನು ಶ್ವೇತಾ ದೀಪಕ್ ಸುರ್ವಾಸೆ (23 ವರ್ಷ) ಎಂದು ಗುರುತಿಸಲಾಗಿದ್ದು, ಆಕೆ ಸಂಭಾಜಿ ನಗರದ ಹನುಮಾನ್ ನಗರ ನಿವಾಸಿ ಎನ್ನಲಾಗಿದೆ.
ಮೂಲಗಳ ಪ್ರಕಾರ ಸ್ನೇಹಿತರ ಜತೆಗೆ ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ಶ್ವೇತಾ ತೆರಳಿದ್ದರು. ಈ ವೇಳೆ ಬೆಟ್ಟದ ಮೇಲೆ ಕಾರು ನಿಲ್ಲಿಸಿ ರೀಲ್ಸ್ ಮಾಡಲು ಮುಂದಾಗಿದ್ದರು. ಕಾರು ಚಾಲನೆ ಬಗ್ಗೆ ಅರಿವಿರದಿದ್ದರೂ ಶ್ವೇತಾ ಕಾರಿನ ಚಾಲಕನ ಸೀಟಿನಲ್ಲಿ ಕೂತು ಡ್ರೈವ್ ಮಾಡುವ ಸಾಹಸ ನಡೆಸಿದ್ದಾರೆ. ಈ ವೇಳೆ ಸ್ನೇಹಿತ ಶಿವರಾಜ್ ಸಂಜಯ್ ಮುಳೆ (25) ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು.
ಟೊಯೊಟಾ ಇಟಿಯೋಸ್ ಕಾರನ್ನು ನಿಧಾನವಾಗಿ ರಿವರ್ಸ್ ಗೇರ್‌ನಲ್ಲಿ ಶ್ವೇತಾ ಚಲಾಯಿಸುತ್ತಿದ್ದರು. ಬ್ರೇಕ್ ಅಥವಾ ಎಕ್ಸಲೇಟರ್ ಬಗ್ಗೆ ತಿಳುವಳಿಕೆ ಇಲ್ಲದೆ ಏಕಾಏಕಿ ಎಕ್ಸಲೇಟರ್ ಒತ್ತಿದ್ದಾರೆ. ನೋಡ ನೋಡುತ್ತಿದ್ದಂತೆ, ಸ್ನೇಹಿತರ ಕಣ್ಣ ಮುಂದೆಯೇ ಕಾರು ಸಮೇತ ಆಕೆ ಸುಮಾರು 300 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ. ಹಿಮ್ಮುಖವಾಗಿ ಚಲಿಸುತ್ತಿದ್ದ ಕಾರು, ಪ್ರಪಾತಕ್ಕೆ ಅವಘಡಗಳನ್ನು ತಡೆಯಲು ನಿರ್ಮಿಸಲಾಗಿದ್ದ ಗೋಡೆ ಭೇದಿಸಿಕೊಂಡು 300 ಅಡಿ ಆಳಕ್ಕೆ ಉರುಳಿದೆ. ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.
ಒಂದು ಗಂಟೆ ಕಾರ್ಯಾಚರಣೆ
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಪೊಲೀಸರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಕಾರನ್ನು ಮೇಲಕ್ಕೆ ಎತ್ತಿದರು. ತೀವ್ರವಾಗಿ ಗಾಯಗೊಂಡಿದ್ದ ಶ್ವೇತಾ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.