ನವದೆಹಲಿ: ರಾಷ್ಟ್ರ ರಾಜಧಾನಿ ಬಿಸಿಗಾಳಿ ಹೊಡೆತಕ್ಕೆ ಸಿಲುಕಿದ್ದು, ಈ ಸಂಬಂಧಿತ ಕಾಯಿಲೆಗಳಿಂದಾಗಿ ಕಳೆದ 24 ಗಂಟೆಗಳಲ್ಲಿ ಆರ್ ಎಂಎಲ್, ಸಪ್ದರ್ ಜಂಗ್ ಮತ್ತು ಎಲ್ ಎನ್ ಜಿಪಿ ಆಸ್ಪತ್ರೆಯಲ್ಲಿ ಒಟ್ಟು 22 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ದೆಹಲಿ ವಿಪರೀತ ಬಿಸಿಗಾಳಿಯಿಂದ ನಲುಗಿದೆ. ಗುರುವಾರ ಬೆಳಗ್ಗೆ ಸ್ವಲ್ಪ ಮಳೆಯಿಂದಾಗಿ ತುಸು ನೆಮ್ಮದಿ ನೀಡಿತು. ಬಿಸಿಗಾಳಿಯಿಂದಾಗಿ ಆಸ್ಪತ್ರೆಗೆ ದಾಖಲಾಗುವವರು ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ಬಿಸಿಗಾಳಿ ಸಂಬಂಧಿತ ಕಾಯಿಲೆಯಿಂದ ದಾಖಲಾದ 33 ರೋಗಿಗಳ ಪೈಕಿ 13 ಜನರು ದುರ್ಮರಣ ಹೊಂದಿದ್ದಾರೆ ಎಂದು ಸಪ್ದರ್ ಜಿಂಗ್ ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಇದೇ ರೀತಿಯ ಕಾರಣದಿಂದ ದಾಖಲಾದ 22 ರೋಗಿಗಳ ಪೈಕಿ ನಾಲ್ವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ದೆಹಲಿ ಸರ್ಕಾರದಿಂದ ಕಾರ್ಯನಿರ್ವಹಿಸುತ್ತಿರುವ ಎಲ್ ಎನ್ ಜೆಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 17 ರೋಗಿಗಳ ಪೈಕಿ ಐವರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಈ ಮಧ್ಯೆ ನಗರದ ಪ್ರಮುಖ ಸ್ಮಶಾನ ನಿಗಮ್ ಬೋದ್ ಘಾಟ್ ನಲ್ಲಿ ಅಂತ್ಯಸಂಸ್ಕಾರದ ಸಂಖ್ಯೆಗಳು ಹೆಚ್ಚಾಗುತ್ತಿವೆ. ಆದಾಗ್ಯೂ, ಅವರೆಲ್ಲರೂ ಬಿಸಿಗಾಳಿಯಿಂದಾಗಿ ಸಾವನ್ನಪ್ಪಿದ್ದಾರೆ ಎಂಬುದು ದೃಢಪಟ್ಟಿಲ್ಲ.
ಬುಧವಾರ ನಿಗಮ್ ಬೋದ್ ಘಾಟ್ ನಲ್ಲಿ ಅಂತ್ಯಸಂಸ್ಕಾರಕ್ಕಾಗಿ 142 ಮೃತದೇಹಗಳನ್ನು ತರಲಾಗಿತ್ತು. ಮಂಗಳವಾರ 97 ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಪ್ರತಿದಿನ 50 ರಿಂದ 60 ಮೃತದೇಹಗಳನ್ನು ಸ್ಮಶಾನಕ್ಕೆ ತರಲಾಗುತ್ತಿದೆ. ಇಂದು ಬೆಳಗ್ಗೆಯಿಂದ 35 ಶವಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ನಿಗಮ್ ಬೋದ್ ಘಾಟ್ ಸಂಚಲನ ಸಮಿತಿ ಪ್ರಧಾನ ಕಾರ್ಯದರ್ಶಿ ಸುಮನ್ ಗುಪ್ತಾ ತಿಳಿಸಿದ್ದಾರೆ.