ನವದೆಹಲಿ: ಕಡಲು ಹಾಗೂ ಕಡಲ ಆರ್ಥಿಕತೆ ದ್ವಿಪಕ್ಷೀಯ ಸಂಬಂಧ ಉತ್ತೇಜಿಸುವುದು, ಸಹಕಾರವನ್ನು ವಿಸ್ತರಿಸುವುದು ಒಪ್ಪಂದಗಳ ಪ್ರಮುಖ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಭೇಟಿ ನೀಡಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನಡುವಿನ ವ್ಯಾಪಕ ಮಾತುಕತೆಯಲ್ಲಿ ಒಪ್ಪಂದಗಳನ್ನು ಅಂತಿಮಗೊಳಿಸಲಾಯಿತು.
ಡಿಜಿಟಲ್ ಡೊಮೇನ್‌ನಲ್ಲಿ ಬಲವಾದ ಸಂಬಂಧಗಳನ್ನು ಬೆಸೆಯುವುದು ಮತ್ತು ಇನ್ನೊಂದು "ಹಸಿರು ಪಾಲುದಾರಿಕೆಯನ್ನು ಹೊಂದುವುದು ಉಭಯ ದೇಶಗಳು ಸಹಿ ಮಾಡಿರುವ ಪ್ರಮುಖ ಒಪ್ಪಂದಗಳಾಗಿವೆ.
ಇದೇ ವೇಳೆ ಬಾಂಗ್ಲ-ಭಾರತ ನಡುವಿನ ರೈಲ್ವೆ ಸಂಪರ್ಕಕ್ಕೆ ಸಂಬಂಧಿಸಿದ ಒಪ್ಪಂದಕ್ಕೂ ಸಹಿ ಮಾಡಲಾಯಿತು.
"ಇಂದು ನಾವು ಹೊಸ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಭವಿಷ್ಯದ ದೃಷ್ಟಿಕೋನವನ್ನು ಸಿದ್ಧಪಡಿಸಿದ್ದೇವೆ. ಹಸಿರು ಸಹಭಾಗಿತ್ವ, ಡಿಜಿಟಲ್ ಪಾಲುದಾರಿಕೆ, ನೀಲಿ ಆರ್ಥಿಕತೆ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಸಾಧಿಸಿದ ಒಮ್ಮತದಿಂದ ಉಭಯ ದೇಶಗಳ ಯುವಕರು ಪ್ರಯೋಜನ ಪಡೆಯುತ್ತಾರೆ ಎಂದು ಮೋದಿ ಮಾಧ್ಯಮಗಳಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಸೀನಾ ಸಹ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತ ಬಾಂಗ್ಲಾದೇಶಕ್ಕೆ ಪ್ರಮುಖ ನೆರೆ ರಾಷ್ಟ್ರವಾಗಿದ್ದು ವಿಶ್ವಾಸಾರ್ಹ ಸ್ನೇಹಿತ ಎಂದು ಬಣ್ಣಿಸಿದ್ದಾರೆ. "ಭಾರತ ನಮ್ಮ ಪ್ರಮುಖ ನೆರೆಯ ವಿಶ್ವಾಸಾರ್ಹ ಸ್ನೇಹಿತ ಮತ್ತು ಪ್ರಾದೇಶಿಕ ಪಾಲುದಾರ ದೇಶವಾಗಿದೆ. 1971 ರ ವಿಮೋಚನಾ ಯುದ್ಧದಿಂದ ಹುಟ್ಟಿದ ಬಾಂಗ್ಲಾದೇಶ ಭಾರತದೊಂದಿಗಿನ ತನ್ನ ಸಂಬಂಧವನ್ನು ಬಹಳವಾಗಿ ಗೌರವಿಸುತ್ತದೆ, ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಭಾರತ ಸರ್ಕಾರ ಮತ್ತು ಜನರು ನೀಡಿದ ಕೊಡುಗೆಯನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ" ಎಂದು ಶೇಖ್ ಹಸೀನಾ ಹೇಳಿದ್ದಾರೆ.
1971 ರ ಯುದ್ಧದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ "ಭಾರತದ ವೀರ ಯೋಧರಿಗೆ" ಹಸೀನಾ ಗೌರವ ಸಲ್ಲಿಸಿದರು.