ನವದೆಹಲಿ: NEET ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯ ದೇಶಾದ್ಯಂತ ಚರ್ಚೆಯಲ್ಲಿರುವಾಗಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಜಂಟಿ ಪ್ರವೇಶ ಪರೀಕ್ಷೆಗಳ ಮೂಲಕ ವೈದ್ಯಕೀಯ ಕೋರ್ಸ್ ಗಳಿಗೆ ದಾಖಲಾತಿಯ ವಿಷಯದಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ ನೀಡುವುದನ್ನು ಪರಿಗಣಿಸಬೇಕೆಂದು ಎಂದು ಮಮತಾ ಬ್ಯಾನರ್ಜಿ ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
"ಪೇಪರ್ ಸೋರಿಕೆ, ಕೆಲವು ವ್ಯಕ್ತಿಗಳು ಮತ್ತು ಪರೀಕ್ಷೆಯ ನಿರ್ವಹಣೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಲಂಚವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಸಂಪೂರ್ಣ, ಸ್ವಚ್ಛ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿರುವ ಕೆಲವು ಗಂಭೀರ ಸಮಸ್ಯೆಗಳಾಗಿವೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ರೀತಿಯ ಪ್ರಶ್ನೆ ಪತ್ರಿಕೆ ಸೋರಿಕೆಗಳು "ಈ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಎದುರು ನೋಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ವೃತ್ತಿ ಮತ್ತು ಆಕಾಂಕ್ಷೆಗಳಿಗೆ ಅಪಾಯವನ್ನುಂಟುಮಾಡುತ್ತವೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಂತಹ ಘಟನೆಗಳು "ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟದೊಂದಿಗೆ ರಾಜಿ ಮಾಡುವುದಲ್ಲದೆ, ವೈದ್ಯಕೀಯ ಸೌಲಭ್ಯಗಳು ಮತ್ತು ಚಿಕಿತ್ಸೆಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ" ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
2017 ರ ಮೊದಲು, ರಾಜ್ಯಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಅನುಮತಿಸಲಾಗುತ್ತಿತ್ತು, ಆದರೆ ಈ ಬಳಿಕ ಕೇಂದ್ರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ತನ್ನದೇ ಆದ ಪರೀಕ್ಷೆಗಳನ್ನು ನಡೆಸಿತು ಎಂಬ ಅಂಶವನ್ನು ಬ್ಯಾನರ್ಜಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಈ ವ್ಯವಸ್ಥೆಯು ಸುಗಮವಾಗಿ ಮತ್ತು ಹೆಚ್ಚಿನ ತೊಂದರೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಇದು ಪ್ರಾದೇಶಿಕ ಪಠ್ಯಕ್ರಮ ಮತ್ತು ಶೈಕ್ಷಣಿಕ ಗುಣಮಟ್ಟಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ರಾಜ್ಯ ಸರ್ಕಾರ ಸಾಮಾನ್ಯವಾಗಿ ಪ್ರತಿ ವೈದ್ಯರಿಗೆ ಶಿಕ್ಷಣ ಮತ್ತು ಇಂಟರ್ನ್‌ಶಿಪ್‌ಗೆ 50 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತದೆ. ಆದ್ದರಿಂದ ರಾಜ್ಯಕ್ಕೆ ವೈದ್ಯಕೀಯ ಕೋರ್ಸ್ ಗಳಿಗೆ ದಾಖಲಾತಿ ವಿಷಯವಾಗಿ ಸ್ವಾಯತ್ತತೆ ನೀಡಬೇಕು. ವೈದ್ಯಕೀಯ ಕೋರ್ಸ್ ದಾಖಲಾತಿ, ಪರೀಕ್ಷೆ ವಿಷಯದಲ್ಲಿ ಈಗಿನ ವ್ಯವಸ್ಥೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ದೇಶದ ಒಕ್ಕೂಟದ ನಿಜವಾದ ಮನೋಭಾವವನ್ನು ಉಲ್ಲಂಘಿಸುತ್ತದೆ. ಪ್ರಸ್ತುತ ವ್ಯವಸ್ಥೆಯು ಬೃಹತ್ ಭ್ರಷ್ಟಾಚಾರಕ್ಕೆ ಕಾರಣವಾಗಿದೆ, ಇದು ಪಾವತಿಸಲು ಶಕ್ತರಾಗಿರುವ ಶ್ರೀಮಂತರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ, ಆದರೆ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ ಮತ್ತು ದೊಡ್ಡ ಬಲಿಪಶುಗಳಾಗಿದ್ದಾರೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ರಾಜ್ಯ ಸರ್ಕಾರಗಳು ಈ ಪರೀಕ್ಷೆಯನ್ನು ನಡೆಸುವ ಹಿಂದಿನ ವ್ಯವಸ್ಥೆಯನ್ನು ಮರುಸ್ಥಾಪಿಸಲು ಮತ್ತು ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲು" ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ.