ಕಾಶ್ಮೀರ: ವಾರ್ಷಿಕ ಅಮರನಾಥ ಯಾತ್ರೆ ಶನಿವಾರ ಆರಂಭವಾಗಿದ್ದು, ಅಮರನಾಥ ಯಾತ್ರಿಕರ ಮೊದಲ ತಂಡ ಬೇಸ್ ಕ್ಯಾಂಪ್‌ಗಳಾದ ಬಾಲ್ಟಾಲ್ ಮತ್ತು ನಾನ್ವಾನ್ ಗಳನ್ನು ತೊರೆದಿದ್ದು, ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಗುಹೆ ದೇಗುಲದತ್ತ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
48 ಕಿಲೋ ದೂರದ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು 14 ಕಿ.ಮೀ ದೂರದ ಬಾಲ್ಟಾಲ್ ಮಾರ್ಗದಿಂದ ಇಂದು ಬೆಳಗ್ಗೆಯಿಂದ ಯಾತ್ರೆ ಆರಂಭವಾಯಿತು. ಅವಳಿ ಮಾರ್ಗಗಳಲ್ಲಿ ಯಾತ್ರಾರ್ಥಿಗಳ ಬ್ಯಾಚ್‌ಗಳನ್ನು ಆಯಾ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಮತ್ತು ನಾಗರಿಕ ಆಡಳಿತ ಅಧಿಕಾರಿಗಳು ಫ್ಲ್ಯಾಗ್ ಆಫ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ಬೆಳಗ್ಗೆ ಜಮ್ಮುವಿನ ಭಗವತಿ ನಗರದ ಯಾತ್ರಿ ನಿವಾಸ ಬೇಸ್ ಕ್ಯಾಂಪ್‌ನಿಂದ 4,603 ಯಾತ್ರಿಕರ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದರು. ಮಧ್ಯಾಹ್ನ ಕಾಶ್ಮೀರ ಕಣಿವೆ ತಲುಪಿದ ಯಾತ್ರಾರ್ಥಿಗಳಿಗೆ ಆಡಳಿತ ಮತ್ತು ಸ್ಥಳೀಯರಿಂದ ಅದ್ದೂರಿ ಸ್ವಾಗತ ದೊರೆಯಿತು.
ಯಾತ್ರಿಕರು ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗವನ್ನು ಹೊಂದಿರುವ ಗುಹಾ ದೇಗುಲಕ್ಕೆ ಪೂಜೆ ಸಲ್ಲಿಸುತ್ತಾರೆ. ಯಾತ್ರೆ ಸುಗಮವಾಗಿ ನಡೆಯಲು ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪೊಲೀಸರು, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಮತ್ತು ಇತರ ಅರೆಸೇನಾ ಪಡೆಗಳ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ಬಿಗಿ ಭದ್ರತೆ ಖಚಿತಪಡಿಸಿಕೊಳ್ಳಲು ನಿಯೋಜಿಸಲಾಗಿದೆ. ವೈಮಾನಿಕ ಕಣ್ಗಾವಲು ಕೂಡ ನಡೆಸಲಾಗುವುದು. 52 ದಿನಗಳ ಯಾತ್ರೆಯು ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.