ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ದೇಶ

ಸಿಎಎ ವಿರುದ್ಧದ ಪ್ರತಿಭಟನೆ ಹಿಂಪಡೆಯಲು ವಿರೋಧ ಪಕ್ಷಗಳಿಗೆ ನೋಟಿಸ್; ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಅಸ್ಸಾಂ ಪೊಲೀಸರು

Ramyashree GN

ಗುವಾಹಟಿ: ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಸಿಎಎ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂಪಡೆಯುವಂತೆ ಅಸ್ಸಾಂ ಪೊಲೀಸರು ವಿರೋಧ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದ್ದು, ಈ ಆದೇಶವನ್ನು ಅನುಸರಿಸಲು ವಿಫಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವುದಾಗಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

16 ಪಕ್ಷಗಳ ಸಂಯುಕ್ತ ವಿರೋಧ ವೇದಿಕೆ, ಅಸ್ಸಾಂ (UOFA) ಸಿಎಎ ಅನುಷ್ಠಾನವನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

'ಯುನೈಟೆಡ್ ಆಪ್ ಫೋರಂ' ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಿಂದ ನೀವು ಮತ್ತು ನಿಮ್ಮ ಸಂಘಟನೆಯು ಅಸ್ಸಾಂನಲ್ಲಿ ಮಾರ್ಚ್ 12ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ 'ಸರ್ಬತ್ಮಕ್ ಹರತಾಳ'ಕ್ಕೆ ಕರೆ ನೀಡಿದ್ದೀರಿ. ಆದರೆ, ಇದರ ಪರಿಣಾಮವಾಗಿ ರಾಜ್ಯದಲ್ಲಿ ಶಾಂತಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ವಿವಿಧ ಪಕ್ಷಗಳ ಪದಾಧಿಕಾರಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಇದಲ್ಲದೆ ಹರತಾಳಕ್ಕೆ ಕರೆ ನೀಡಿರುವುದು ಹೆದ್ದಾರಿ ಮತ್ತು ರೈಲ್ವೆ ಟ್ರ್ಯಾಕ್ ತಡೆಗೆ ಕಾರಣವಾಗುತ್ತದೆ. ಇದು ಸುಪ್ರೀಂ ಕೋರ್ಟ್, ಕೇರಳ ಹೈಕೋರ್ಟ್ ಮತ್ತು ಗೌಹಾಟಿ ಹೈಕೋರ್ಟ್ ತೀರ್ಪುಗಳಿಂದ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಘೋಷಿಸಲಾಗಿದೆ. ಹರತಾಳ ಹಿಂಪಡೆದು ರಾಜ್ಯದಲ್ಲಿ ಶಾಂತಿ ಕಾಪಾಡಲು ಸಹಕರಿಸಿ. ವಿಫಲವಾದರೆ ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಪಕ್ಷಗಳಿಗೆ ಆದೇಶ ನೀಡಲಾಗಿದೆ.

ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಆಸ್ತಿಗಳು ಸೇರಿದಂತೆ ಸಾರ್ವಜನಿಕ/ಖಾಸಗಿ ಆಸ್ತಿಗೆ ಯಾವುದೇ ಹಾನಿ ಉಂಟಾದರೆ ಕಾನೂನಿನ ಸೂಕ್ತ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯ ಒಟ್ಟು ವೆಚ್ಚವನ್ನು ನಿಮ್ಮಿಂದ ಮತ್ತು ನಿಮ್ಮ ಸಂಸ್ಥೆಯಿಂದ ವಸೂಲಿ ಮಾಡಲಾಗುವುದು ಎಂದು ಅದು ಹೇಳಿದೆ.

ಈ ನೋಟಿಸ್‌ಗಳನ್ನು ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಯಾವುದೇ ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಮತ್ತು ಜನರ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳಲು ಪೊಲೀಸರು ನೋಟಿಸ್‌ಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಈಮಧ್ಯೆ, ರಾಜ್ಯದಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

2019ರ ಡಿಸೆಂಬರ್‌ನಲ್ಲಿ ಈ ವಿಷಯದ ಬಗ್ಗೆ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಾಕ್ಷಿಯಾದ ಗುವಾಹಟಿ ಸೇರಿದಂತೆ ರಾಜ್ಯದ ಹೆಚ್ಚಿನ ಪಟ್ಟಣಗಳಲ್ಲಿ ಎಲ್ಲ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಲಾಗಿದೆ ಮತ್ತು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

SCROLL FOR NEXT