ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
ದೇಶ

ಪಶ್ಚಿಮ ಬಂಗಾಳ: ಸಿಎಂ ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ

Nagaraja AB

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯವಾಗಿರುವ ಬಗ್ಗೆ ವರದಿಯಾಗಿದೆ.

ಮಮತಾ ಬ್ಯಾನರ್ಜಿ ಅವರ ಹಣೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟಿಎಂಸಿ ಪಕ್ಷ ಅಧಿಕೃತವಾಗಿ ತಿಳಿಸಿದೆ.

ಟಿಎಂಸಿ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಮತಾ ಬ್ಯಾನರ್ಜಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ಫೋಟೋ ಹಂಚಿಕೊಂಡಿದ್ದು, ಅವರ ಹಣೆಯ ಮಧ್ಯದಲ್ಲಿ ಆಳವಾದ ಗಾಯವಾಗಿದ್ದು, ರಕ್ತ ಮುಖದ ಮೇಲೆ ಬಿದ್ದಿರುವ ಫೋಟೋಗಳನ್ನು ಹರಿಯಬಿಟ್ಟಿದೆ.

ಹಿಂದಿನಿಂದ ಯಾರೋ ತಳ್ಳಿದ್ದರಿಂದ ಮನೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಸಂಜೆ 7-30 ರಲ್ಲಿ ಈ ಘಟನೆ ನಡೆದಿದ್ದು, ಅವರ ಹಣೆ ಹಾಗೂ ಮೂಗಿನ ಮೇಲೆ ಆಳವಾದ ಗಾಯವಾಗಿದೆ ಎಂದು ಎಸ್‌ಎಸ್‌ಕೆಎಂ ಆಸ್ಪತ್ರೆಯ ನಿರ್ದೇಶಕ ಮಣಿಮೊಯ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.

ಆದಾಗ್ಯೂ, ಅವರು ಹಿಂದಿನಿಂದ ತಳ್ಳುವಿಕೆ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.ಮಮತಾ ಕೆಳಗೆ ಬಿದ್ದಾಗ ತಾವು ಧಾವಿಸಿ ಬಂದಿದ್ದಾಗಿ ಅವರ ಅತ್ತಿಗೆ ಕಜಾರಿ ಬ್ಯಾನರ್ಜಿ ಹೇಳಿದ್ದಾರೆ. ಆದರೆ, ಘಟನೆಗೆ ಕಾರಣವನ್ನು ಅವರು ತಿಳಿಸಲಿಲ್ಲ. ನಂತರ ಮಮತಾ ಅವರನ್ನು ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದಕ್ಷಿಣ ಕೋಲ್ಕತ್ತಾದಲ್ಲಿ ತಮ್ಮ ರಾಜಕೀಯ ಮಾರ್ಗದರ್ಶಕ ಸುಬ್ರತಾ ಮುಖರ್ಜಿ ಅವರ ಪ್ರತಿಮೆಯನ್ನು ಉದ್ಘಾಟಿಸುವ ಕಾರ್ಯಕ್ರಮದಿಂದ ಹಿಂತಿರುಗಿದ ಸ್ವಲ್ಪ ಸಮಯದ ನಂತರ ಮುಖ್ಯಮಂತ್ರಿ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯವರ ಗಾಯಕ್ಕೆ ನಾಲ್ಕು ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆಂತರಿಕ ರಕ್ತಸ್ರಾವವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿಯನ್ನು ಸಿಟಿ ಸ್ಕ್ಯಾನ್ ಮಾಡಲಾಗಿದೆ. ಅವರ ರಕ್ತದೊತ್ತಡದಲ್ಲಿ ಯಾವುದೇ ಏರುಪೇರು ಉಂಟಾಗಿದೆಯೇ ಎಂದು ಪರೀಕ್ಷಿಸಿದ್ದೇವೆ, ಎಂದು ಆಸ್ಪತ್ರೆಯ ವೈದ್ಯರು ಹೇಳಿದರು.

SCROLL FOR NEXT