ಬಂಧಿತ ಮೀನುಗಾರರು
ಬಂಧಿತ ಮೀನುಗಾರರು 
ದೇಶ

ಶ್ರೀಲಂಕಾದಿಂದ 21 ರಾಮೇಶ್ವರಂ ಮೀನುಗಾರರ ಬಂಧನ

Nagaraja AB

ರಾಮನಾಥಪುರಂ: ಅಂತಾರಾಷ್ಟ್ರೀಯ ಜಲ ಗಡಿ (ಐಎಂಬಿಎಲ್) ಉಲ್ಲಂಘನೆ ಆರೋಪದ ಮೇಲೆ ರಾಮೇಶ್ವರಂ ಮೂಲದ 21 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಭಾನುವಾರ ಮುಂಜಾನೆ ಬಂಧಿಸಿದೆ. ಹೆಚ್ಚಿನ ತನಿಖೆಗಾಗಿ ಅವರನ್ನು ಕಂಕಸಂತುರೈ ಬಂದರಿಗೆ ಕರೆದೊಯ್ಯಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾಗಿರುವುದರಿಂದ ತಾವು ಅಸಹಾಯಕರಾಗಿದ್ದೇವೆ ಎಂದು ರಾಮೇಶ್ವರಂನಲ್ಲಿರುವ ಮೀನುಗಾರರ ಸಂಘ ಹೇಳಿದೆ.

ರಾಮೇಶ್ವರಂ ಮೀನುಗಾರಿಕಾ ಬಂದರಿನಿಂದ ಶನಿವಾರ ಸಮುದ್ರಕ್ಕೆ ತೆರಳಿದ್ದ 480 ಯಾಂತ್ರೀಕೃತ ದೋಣಿಗಳ ಪೈಕಿ, ಶ್ರೀಲಂಕಾ ನೌಕಾಪಡೆಯು ಐಎಂಬಿಎಲ್‌ಗೆ ಸಮೀಪದಲ್ಲಿದ್ದ ಭಾರತೀಯ ದೋಣಿಗಳನ್ನು ಓಡಿಸಿದೆ. ಎರಡು ದೋಣಿಗಳು ಲಂಕಾದ ನೀರಿನಲ್ಲಿ ಉಳಿದುಕೊಂಡಿದ್ದು, ಅದರ 21 ಸಿಬ್ಬಂದಿಯನ್ನು ಲಂಕಾ ನೌಕಾಪಡೆ ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ಉತ್ತರ ನೌಕಾ ಕಮಾಂಡ್ ಡೆಲ್ಫ್ಟ್ ದ್ವೀಪದ ಶ್ರೀಲಂಕಾದ ನೀರಿನಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿರುವುದನ್ನು ಗಮನಿಸಿದ ನಂತರ ಭಾರತೀಯ ದೋಣಿಗಳ ಗುಂಪನ್ನು ಓಡಿಸಲು ಫಾಸ್ಟ್ ಅಟ್ಯಾಕ್ ಕ್ರಾಫ್ಟ್ ಅನ್ನು ನಿಯೋಜಿಸಿದೆ ಎಂದು ಶ್ರೀಲಂಕಾದ ನೌಕಾಪಡೆಯ ಅಧಿಕೃತ ಮೂಲಗಳು ಹೇಳಿವೆ. ಕಾರ್ಯಾಚರಣೆ ಪರಿಣಾಮವಾಗಿ ಎರಡು ಭಾರತೀಯ ದೋಣಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಶ್ರೀಲಂಕಾದ ಸಮುದ್ರದಲ್ಲಿ ಉಳಿದುಕೊಂಡಿದ್ದ 21 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ದೋಣಿಗಳು ಮತ್ತು ಮೀನುಗಾರರನ್ನು ಕಂಕಸಂತುರೈ ಬಂದರಿಗೆ ತರಲಾಗಿದ್ದು, ಕಾನೂನು ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ. ಭಾನುವಾರದ ಬಂಧನದೊಂದಿಗೆ, ಶ್ರೀಲಂಕಾ ನೌಕಾಪಡೆಯು 2024ರಲ್ಲಿ ಒಟ್ಟು 18 ಭಾರತೀಯ ದೋಣಿಗಳನ್ನು ವಶಪಡಿಸಿಕೊಂಡಿದ್ದು, ಶ್ರೀಲಂಕಾದ ಸಮುದ್ರದಿಂದ 146 ಭಾರತೀಯ ಮೀನುಗಾರರನ್ನು ಬಂಧಿಸಿದೆ.

SCROLL FOR NEXT