ನವದೆಹಲಿ: ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೈತಿಕತೆ ಆಧಾರದ ಮೇಲೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರು ಶನಿವಾರ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಗುರುವಾರ ರಾತ್ರಿ ದೆಹಲಿಯಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ ಇಡಿ ವಶದಲ್ಲಿದ್ದಾರೆ. ಆದರೆ ದೆಹಲಿ ಸಿಎಂ ಆಗಿ ಮುಂದುವರೆದಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಿರುಪಮ್, "ಅಬಕಾರಿ ನೀತಿಯ ಹಿಂದಿನ ಸತ್ಯವೇನು ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸುತ್ತವೆ. ಪ್ರಕರಣದಲ್ಲಿ ಮುಖ್ಯಮಂತ್ರಿಯೊಬ್ಬರು ಆರೋಪಿಯಾಗಿದ್ದಾರೆ ಮತ್ತು ಕಸ್ಟಡಿಯಲ್ಲಿದ್ದಾರೆ. ಆದರೂ ಅವರು ಇನ್ನೂ ತಮ್ಮ ಹುದ್ದೆಗೆ ಅಂಟಿಕೊಂಡಿದ್ದಾರೆ. ಇದು ಯಾವ ರೀತಿಯ ನೈತಿಕತೆ?" ಎಂದು ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಅವರು ತಮ್ಮ ಜೀವನದ ಅತ್ಯಂತ ದೊಡ್ಡ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ ಮತ್ತು ಸಹಾನುಭೂತಿಗೆ ಅರ್ಹರಾಗಿದ್ದಾರೆ. ಆದರೆ ಸಿಎಂ ಸ್ಥಾನದಿಂದ ಕೆಳಗಿಳಿಯದ ಅವರ ನಿಲುವು ಭಾರತದ ರಾಜಕೀಯವನ್ನು ಘಾಸಿಗೊಳಿಸುತ್ತಿದೆ ಎಂದು ಮಾಜಿ ಕಾಂಗ್ರೆಸ್ ಸಂಸದ ಹೇಳಿದ್ದಾರೆ.
ಇತರ ವಿವಿಧ ಪಕ್ಷಗಳ ನಾಯಕರು ತಮ್ಮ ವಿರುದ್ಧ ಆರೋಪ ಕೇಳಿಬಂದಾಗ ರಾಜೀನಾಮೆ ನೀಡಿದ್ದಾರೆ. ಆದರೆ 11 ವರ್ಷದ ರಾಜಕೀಯ ಪಕ್ಷ ಎಎಪಿ ಸಂಪೂರ್ಣವಾಗಿ ಅನೈತಿಕವಾಗಿದೆ ಎಂಬುದಕ್ಕೆ ಕೇಜ್ರಿವಾಲ್ ಪ್ರಕರಣ ಉದಾಹರಣೆಯಾಗಿದೆ" ಎಂದು ನಿರುಪಮ್ ಅವರು ಹೇಳಿದ್ದಾರೆ.