ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶ Online desk
ದೇಶ

ಹಿಮಾಚಲ ಪ್ರದೇಶ: ಉನಾ ದೇವಾಲಯದ ಬಳಿ ಕಾಲ್ತುಳಿತ; ಇಬ್ಬರು ಸಾವು, 7 ಮಂದಿಗೆ ಗಾಯ!

Srinivas Rao BV

ಉನಾ: ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ದೇವಾಲಯವೊಂದರ ಬಳಿ ಭೂ ಕುಸಿತ ಉಂಟಾಗಿ ಕಾಲ್ತುಳಿತ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇರಾ ಬಾಬಾ ವದ್ಭಾಗ್ ಸಿಂಗ್ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಉನಾದಿಂದ 40 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯುವುದಕ್ಕಾಗಿ ಇಲ್ಲಿಗೆ ಸಹಸ್ರಾರು ಮಂದಿ ಭಕ್ತಾದಿಗಳು ಆಗಮಿಸುತ್ತಾರೆ.

ಬಾಬಾ ವದ್ಭಾಗ್ ಸಿಂಗ್ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಭಕ್ತರು ಮುಂಜಾನೆ 5 ಗಂಟೆ ಸುಮಾರಿಗೆ ಚರಣ್ ಗಂಗಾದಲ್ಲಿನ ಪವಿತ್ರ ಬುಗ್ಗೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಪರ್ವತದಿಂದ ನಾಲ್ಕೈದು ದೊಡ್ಡ ಕಲ್ಲುಗಳು ಜಾರಿಬಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 'ಚರಣ ಗಂಗಾ' ಸ್ನಾನವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಸೋಮವಾರ ಹುಣ್ಣಿಮೆಯ ಕಾರಣ ಗಂಗೆಯ ಪವಿತ್ರ ಪಾದಗಳ ಬಳಿ ಸಾಕಷ್ಟು ಜನಸಂದಣಿ ಇತ್ತು.

ಪರ್ವತದಿಂದ ಕಲ್ಲುಗಳು ಉರುಳುತ್ತಿರುವುದನ್ನು ನೋಡಿದ ಜನರು ಓಡಿದ ಪರಿಣಾಮ ಕಾಲ್ತುಳಿತ ಉಂಟಾಯಿತು. ಈ ವೇಳೆ 9 ಭಕ್ತರಿಗೆ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆ ಅಂಬ್ಗೆ ಸಾಗಿಸಲಾಯಿತು. ಮೃತರನ್ನು ಪಂಜಾಬ್‌ನ ಫರೀದ್‌ಕೋಟ್ ನಿವಾಸಿಗಳಾದ ಬಿಲ್ಲಾ ಮತ್ತು ಬಲ್ವೀರ್ ಚಂದ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಗಾಯಗೊಂಡವರಲ್ಲಿ ಐವರನ್ನು ಉನಾ ವಲಯ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇಬ್ಬರನ್ನು ಪಿಜಿಐ ಚಂಡೀಗಢಕ್ಕೆ ಕಳಿಸಲಾಗಿದೆ.

ಗಾಯಗೊಂಡಿರುವ ಭಕ್ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಎಸ್ಪಿ ಸಂಜೀವ್ ಭಾಟಿಯಾ ತಿಳಿಸಿದ್ದಾರೆ. ಪರಿಸ್ಥಿತಿ ಸಹಜವಾಗುವವರೆಗೆ ಗಂಗಾನದಿಯ ಪುಣ್ಯಸ್ನಾನಕ್ಕೆ ಭಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ಉನಾ ಜಿಲ್ಲಾಧಿಕಾರಿ ಜತಿನ್ ಲಾಲ್ ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳಲಾಗುವುದು, ಇದರಿಂದ ಅಪಘಾತಕ್ಕೆ ನಿಜವಾದ ಕಾರಣವನ್ನು ತಿಳಿಯಬಹುದು ಎಂದು ಎಸ್ಪಿ ಉನಾ ರಾಕೇಶ್ ಸಿಂಗ್ ಹೇಳಿದ್ದಾರೆ.

SCROLL FOR NEXT