ಎಎಪಿ ಪ್ರತಿಭಟನೆ
ಎಎಪಿ ಪ್ರತಿಭಟನೆ 
ದೇಶ

ಕೇಜ್ರಿವಾಲ್ ಬಂಧನ ಖಂಡಿಸಿ ದೆಹಲಿಯಲ್ಲಿ ಎಎಪಿ ಪ್ರತಿಭಟನೆ: ಹಲವರ ವಶಕ್ಕೆ, ದೆಹಲಿ 'ಪೊಲೀಸ್ ರಾಜ್ಯ'ವಾಗಿದೆ ಎಂದ ಆಪ್

Lingaraj Badiger

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನ ಖಂಡಿಸಿ ಎಎಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಬೀದಿಗಿಳಿದಿದ್ದು, ಪಟೇಲ್‌ ಚೌಕ್‌ನ ಲೋಕ ಕಲ್ಯಾಣ್‌ ಮಾರ್ಗ್‌ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಮಾತನಾಡಿದ ಆಮ್ ಆದ್ಮಿ ಪಕ್ಷದ (ಎಎಪಿ) ದೆಹಲಿ ಘಟಕದ ಸಂಚಾಲಕ ಗೋಪಾಲ್ ರೈ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಗರದಾದ್ಯಂತ ಸೆಕ್ಷನ್ 144 ಜಾರಿ ಮಾಡಿದೆ. ದೆಹಲಿಯನ್ನು "ಪೊಲೀಸ್ ರಾಜ್ಯವಾಗಿ" ಮಾರ್ಪಡಿಸಿದೆ ಎಂದು ಆರೋಪಿಸಿದರು.

ಆಪ್ ಕಾರ್ಯಕಾರ್ತರು ಇಂಕ್ವಿಲಾಬ್‌ ಜಿಂದಾಬಾದ್‌ ಎಂಬ ಘೋಷಣೆಗಳನ್ನು ಕೂಗುತ್ತ ಕೇಂದ್ರದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಪ್ ಹಿರಿಯ ನಾಯಕ ಸೋಮನಾಥ್ ಭಾರ್ತಿ, ದೆಹಲಿ ಅಸೆಂಬ್ಲಿ ಉಪ ಸ್ಪೀಕರ್ ರಾಖಿ ಬಿರ್ಲಾ ಮತ್ತು ಪಂಜಾಬ್ ಸಚಿವ ಹರ್ಜೋತ್ ಸಿಂಗ್ ಬೇನ್ಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಬಲ ಪ್ರಯೋಗ ಮಾಡುವ ಮೂಲಕ ನಮ್ಮ ಪ್ರತಿಭಟನೆ ತಡೆಯಲು ಸಾಧ್ಯವಿಲ್ಲ. ನಮ್ಮ ಪಕ್ಷದ ಮಹಿಳಾ ಕಾರ್ಯಕರ್ತರನ್ನು ಎಳೆದುಕೊಂಡು ಹೋಗಿ ಬಂಧಿಸಲಾಗಿದೆ ಎಂದು ಗೋಪಾಲ್ ರೈ ಹೇಳಿದ್ದಾರೆ.

"ದೆಹಲಿ ಪೊಲೀಸರು ಯಾವುದೇ ಕಾರಣವಿಲ್ಲದೆ ಡೆಪ್ಯೂಟಿ ಸ್ಪೀಕರ್ ರಾಖಿ ಬಿರ್ಲಾ ಮತ್ತು ಎಎಪಿಯ ಅನೇಕ ಕಾರ್ಯಕರ್ತರನ್ನು ಮತ್ತು ಅರವಿಂದ್ ಕೇಜ್ರಿವಾಲ್ ಬೆಂಬಲಿಗರನ್ನು ವಶಕ್ಕೆ ಪಡೆದಿದ್ದಾರೆ. ದೆಹಲಿ ಪೊಲೀಸರು ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಎಎಪಿ ಬೆಂಬಲಿಗರನ್ನು ಬಂಧಿಸುತ್ತಿರುವುದು ಆಘಾತಕಾರಿ" ಎಂದು ಸೋಮನಾಥ್ ಭಾರ್ತಿ ಪೋಸ್ಟ್ ಮಾಡಿದ್ದಾರೆ.

ಏತನ್ಮಧ್ಯೆ, ಮುಖ್ಯಮಂತ್ರಿ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯ ದೆಹಲಿ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

SCROLL FOR NEXT