ರಾಹುಲ್ ಗಾಂಧಿ
ರಾಹುಲ್ ಗಾಂಧಿ  
ದೇಶ

ಖಾತೆ ಮುಟ್ಟುಗೋಲು: ನಿಧಿ ಸಂಗ್ರಹಕ್ಕೆ ಮುಂದಾಗುವಂತೆ ರಾಜ್ಯ ಘಟಕಗಳಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ

Sumana Upadhyaya

ನವದೆಹಲಿ: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಕಠಿಣ ಕ್ರಮ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷವು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿನ ತನ್ನ ಜಾಹೀರಾತು ವೆಚ್ಚವನ್ನು ಕಡಿತಗೊಳಿಸಿದೆ.

ಪಕ್ಷದ ಹೈಕಮಾಂಡ್ ಈಗಾಗಲೇ ಎಲ್ಲಾ ರಾಜ್ಯ ಘಟಕಗಳಿಗೆ ಮನೆ-ಮನೆಗೆ ಪ್ರಚಾರದ ಮೂಲಕ ಅಥವಾ ಜನರನ್ನು ತಲುಪುವ ಮೂಲಕ ನಿಧಿಯನ್ನು ಸಂಗ್ರಹಿಸಲು ಸಂದೇಶವನ್ನು ಕಳುಹಿಸಿದೆ. ಇದು ಸಾಮಾಜಿಕ ಮಾಧ್ಯಮ ವೇದಿಕೆಗಳು, ಪ್ರಭಾವಿಗಳು ಮತ್ತು ಕೃತಕ ಬುದ್ಧಿಮತ್ತೆ (AI) ಉಪಕರಣಗಳಂತಹ ಹಲವಾರು ಇತರ ವಿಧಾನಗಳ ಮೂಲಕ ತನ್ನ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.

ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಿರುವುದರಿಂದ ಪ್ರಚಾರ ಕಾರ್ಯಕ್ಕೆ 2 ರೂಪಾಯಿ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಈಗಾಗಲೇ ಕ್ರೌಡ್ ಫಂಡಿಂಗ್ ಮೂಲಕ ನಿಧಿ ಸಂಗ್ರಹಿಸಲು ಪ್ರಾರಂಭಿಸಿದೆ ಎಂದು ಪಕ್ಷದ ಸಂಸದ ಬಿ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ. ವಿರುದುನಗರದಿಂದ ಸತತ ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿರುವ ಟ್ಯಾಗೋರ್, ಬಿಜೆಪಿಯು ಪ್ರತಿಪಕ್ಷಗಳ ಕತ್ತು ಹಿಸುಕಲು ಇಡಿ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಜನರಿಗೆ ತಿಳಿಸಲು ಪಕ್ಷವು ಮನೆ ಮನೆಗೆ ಪ್ರಚಾರ ನಡೆಸುತ್ತಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಮುದ್ರಿತ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಪ್ರಚಾರಕ್ಕಾಗಿ ನಮ್ಮ ವೆಚ್ಚವನ್ನು ನಾವು ಕಡಿಮೆಗೊಳಿಸಿದ್ದೇವೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಒಂದು ದಿನದ ಪ್ರಚಾರ ನಡೆಸಲು 50 ಕೋಟಿ ವೆಚ್ಚವಾಗಬಹುದು. ನಮ್ಮ ಬಳಿ ಈಗ ಹಣವಿಲ್ಲ ಎನ್ನುತ್ತಾರೆ ಟ್ಯಾಗೋರ್.

ನಾವು ಜನರ ಬಳಿಗೆ ಹೋಗಿ ದೇಣಿಗೆ ನೀಡುವಂತೆ ಕೇಳುತ್ತಿದ್ದೇವೆ. ರಾಜ್ಯ ಘಟಕವು ಈಗಾಗಲೇ ಕ್ರೌಡ್ ಫಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸುತ್ತಿದೆ. ಐಟಿ ಕ್ರಮವು ಚುನಾವಣೆಯ ಹೊಸ್ತಿಲಲ್ಲಿ ನಮಗೆ ದೊಡ್ಡ ಹಿನ್ನಡೆಯಾಗಿದೆ. ಆರು ತಿಂಗಳ ಹಿಂದೆಯೇ ನಮಗೆ ತಿಳಿದಿದ್ದರೆ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು ಎಂದು ಟ್ಯಾಗೋರ್ ಹೇಳಿದರು.

ಸಂಪನ್ಮೂಲಗಳ ಕೊರತೆಯಿಂದಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ವೆಚ್ಚದಲ್ಲಿ ಪಕ್ಷವು ಬಿಜೆಪಿಗಿಂತ ಹಿಂದುಳಿದಿದೆ ಎಂದು ಲೋಕಸಭೆ ಚುನಾವಣೆಯ ಕಾಂಗ್ರೆಸ್ ವಾರ್ ರೂಮ್ ಅಧ್ಯಕ್ಷ ವೈಭವ್ ವಾಲಿಯಾ ಹೇಳುತ್ತಾರೆ. “ಮೊದಲ ಹಂತದ ಚುನಾವಣೆಗೆ ಕೇವಲ 19 ದಿನಗಳು ಬಾಕಿಯಿದೆ ಆದರೆ ನಾವು ಯಾವುದೇ ಪತ್ರಿಕೆ ಅಥವಾ ಟಿವಿಯಲ್ಲಿ ಯಾವುದೇ ಪ್ರಮುಖ ಪ್ರಚಾರವನ್ನು ಹೊಂದಿಲ್ಲ. ನಾವು ಚುನಾವಣಾ ಬಾಂಡ್‌ಗಳ ಕುರಿತು ಜಾಹೀರಾತು ನೀಡಲು ಪ್ರಯತ್ನಿಸಿದರೂ, ಹೆಚ್ಚಿನ ಪತ್ರಿಕೆಗಳು ಅದನ್ನು ಪ್ರಕಟಿಸಲು ನಿರಾಕರಿಸಿದವು ಎಂದು ಅವರು ಹೇಳಿದರು.

ಹಣದ ಕೊರತೆಯಿಂದಾಗಿ ಕಾಂಗ್ರೆಸ್ ಈಗ ಸಾಮಾಜಿಕ ಮಾಧ್ಯಮ ಖಾತೆಗಳ ಮೊರೆ ಹೋಗಿವೆ. ಕೇರಳದಲ್ಲಿ, ಸ್ವಂತವಾಗಿ ಹಣವನ್ನು ಸಂಗ್ರಹಿಸಲು ಕೇಂದ್ರ ನಾಯಕತ್ವವು ಪಕ್ಷದ ನಾಯಕರನ್ನು ಕೇಳಿಕೊಂಡಿದ್ದರಿಂದ, ಹಣವನ್ನು ಸಂಗ್ರಹಿಸಲು ಕೂಪನ್‌ಗಳನ್ನು ಮುದ್ರಿಸಲು ಮತ್ತು ಅವುಗಳನ್ನು ಬೂತ್ ಮಟ್ಟದಲ್ಲಿ ವಿತರಿಸಲು ಪಕ್ಷವು ನಿರ್ಧರಿಸಿದೆ.

ಒಡಿಶಾದಲ್ಲಿ, ಪ್ರದೇಶ ಕಾಂಗ್ರೆಸ್ ಸಮಿತಿ (OPCC) ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿ ಅಭ್ಯರ್ಥಿಗಳಿಗೆ ಪ್ರಚಾರ ಸಾಮಗ್ರಿಗಳ ಪೂರೈಕೆಗಾಗಿ ತಲಾ 50,000 ರೂಪಾಯಿಗಳನ್ನು ನೀಡುವಂತೆ ಸೂಚಿಸಿದೆ.

SCROLL FOR NEXT