ಮೈನ್‌ಪುರಿ: ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಮಹಾರಾಣಾ ಪ್ರತಾಪ್ ಪ್ರತಿಮೆ ಧ್ವಂಸಗೊಳಿಸಿದ ಮತ್ತು ಗೂಂಡಾಗಿರಿ ನಡೆಸಿದ ಆರೋಪದ ಮೇಲೆ ಸುಮಾರು 90 ರಿಂದ 100 ಸಮಾಜವಾದಿ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ನಿವಾಸಿಗಳ ಪ್ರಕಾರ, ಶನಿವಾರ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ರೋಡ್ ಶೋ ನಂತರ ಈ ಘಟನೆ ನಡೆದಿದೆ. ಅಖಿಲೇಶ್ ಯಾದವ್ ಅವರು ತಮ್ಮ ಪತ್ನಿ, ಮೈನ್‌ಪುರಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಪರ ಮತ ಯಾಚಿಸಿದರು.
ಘಟನೆಯ ಕುರಿತು ಪೊಲೀಸರು ಸ್ವಯಂ ಪ್ರೇರಿತವಾಗಿ 90 ರಿಂದ 100 ಸಮಾಜವಾದಿ ಪಕ್ಷದ ಕಾರ್ಯಕರ್ತರ ವಿರುದ್ಧ ಗಲಭೆ, ಧಾರ್ಮಿಕ ದ್ವೇಷ, ಸಾರ್ವಜನಿಕ ಆಸ್ತಿ ಹಾನಿ ಮತ್ತು ಶಾಂತಿ ಭಂಗದ ಆರೋಪದಡಿಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಎಸ್‌ಎಚ್‌ಒ ಫತೇ ಬಹದ್ದೂರ್ ಸಿಂಗ್ ಭದೌರಿಯಾ ಅವರು ತಿಳಿಸಿದ್ದಾರೆ.
ಎಸ್ ಪಿ ಕಾರ್ಯಕರ್ತರ ಈ ವಿಧ್ವಂಸಕ ಕೃತ್ಯವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಂಡಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆದಿತ್ಯನಾಥ್, 'ರಾಷ್ಟ್ರೀಯ ನಾಯಕ ಮಹಾರಾಣಾ ಪ್ರತಾಪ್ ಅವರ ಪ್ರತಿಮೆಯನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ಧ್ವಂಸಗೊಳಿಸಿರುವುದು ಮತ್ತು ಅವರ ಅವಹೇಳನಕಾರಿ ವರ್ತನೆ ಅತ್ಯಂತ ಖಂಡನೀಯ. ಈ ಕೃತ್ಯವನ್ನು ನಾನು ಖಂಡಿಸುತ್ತೇನೆ' ಎಂದು ಹೇಳಿದ್ದಾರೆ.