ಚಂಡೀಗಢ: ಮುಂಬೈನ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ ಅನುಜ್ ಅವರ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಅನುಜ್ ಅವರ ತಾಯಿ ರೀತಾ ದೇವಿ ಅವರು ಹೊಸದಾಗಿ ಮರಣೋತ್ತರ ಪರೀಕ್ಷೆಯನ್ನು ಕೋರಿ ಸಲ್ಲಿಸಿದ ಅರ್ಜಿಯ ಮೇರೆಗೆ ಈ ನಿರ್ದೇಶನ ನೀಡಿದೆ.
ಮೇ 10 ಅಥವಾ ಅದಕ್ಕೂ ಮೊದಲು ಫರೀದ್‌ಕೋಟ್‌ನಲ್ಲಿರುವ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ಮೃತದೇಹವನ್ನು ಹಸ್ತಾಂತರಿಸುವಂತೆ ನ್ಯಾಯಮೂರ್ತಿ ವಿನೋದ್ ಎಸ್ ಭಾರದ್ವಾಜ್ ಅವರು ತಿಳಿಸಿದ್ದಾರೆ.
ಅರ್ಜಿಯಲ್ಲಿ ಪ್ರಸ್ತುತಪಡಿಸಲಾದ ಪ್ರಕರಣದ ಯಾವುದೇ ದೌರ್ಬಲ್ಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿದ್ದು, ಮರಣೋತ್ತರ ಪರೀಕ್ಷೆ ನಡೆಸುವಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಏಪ್ರಿಲ್ 14ರ ಮುಂಜಾನೆ ಸಲ್ಮಾನ್ ಖಾನ್ ಅವರ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ನಿವಾಸದ ಹೊರಗೆ ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು.
ಬಂದೂಕು ಮತ್ತು ಗುಂಡುಗಳನ್ನು ಸರಬರಾಜು ಮಾಡಿದ ಆರೋಪದಲ್ಲಿ ಕುಮಾರ್ ಅವರನ್ನು ಪಂಜಾಬ್‌ನಿಂದ ಏಪ್ರಿಲ್ 26 ರಂದು ಬಂಧಿಸಲಾಯಿತು ಮತ್ತು ಏಪ್ರಿಲ್ 30 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಪಂಜಾಬ್‌ನ ಫಾಜಿಲ್ಕಾ ನಿವಾಸಿ ಕುಮಾರ್ ಅವರು ಮೇ 1 ರಂದು ಇಲ್ಲಿನ ಕ್ರಾಫರ್ಡ್ ಮಾರ್ಕೆಟ್‌ನಲ್ಲಿರುವ ಕಮಿಷನರೇಟ್ ಸಂಕೀರ್ಣದಲ್ಲಿರುವ ಅಪರಾಧ ವಿಭಾಗದ ಲಾಕ್‌ಅಪ್‌ನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಮರಣೋತ್ತರ ಪರೀಕ್ಷೆಯ ನಂತರ ಅನುಜ್ ಅವರ ದೇಹವನ್ನು ಅರ್ಜಿದಾರರಿಗೆ ಹಸ್ತಾಂತರಿಸಲಾಗಿದೆ. ಪಿತೂರಿಯ ಅಡಿಯಲ್ಲಿ ತನ್ನ ಮಗನ ಹತ್ಯೆ ಮಾಡಲಾಗಿದೆ ಮತ್ತು ಅನ್ಯಾಯವಾಗುವ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಲು, ಮರಣೋತ್ತರ ಪರೀಕ್ಷೆಯನ್ನು ಮರು ನಡೆಸುವುದು ಅತ್ಯಗತ್ಯ ಎಂದು ಅರ್ಜಿದಾರರ ಪರ ವಕೀಲ ದೇವಿಂದರ್ ಸಿಂಗ್ ಖುರಾನಾ ಹೇಳಿದರು.