ಶ್ರೀನಗರ: ಭಾರತೀಯ ಗಡಿಯೊಳಗೆ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಪಾಕಿಸ್ತಾನದಿಂದ ಬಂದ ಡ್ರೋನ್ ಅನ್ನು ಭಾರತೀಯ ಸೇನೆ ಶುಕ್ರವಾರ ತಡರಾತ್ರಿ ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಪಾಕ್ ಗಡಿಯಲ್ಲಿ ಡ್ರೋನ್ ಹಾರಾಟ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದ್ದ ಬಿಎಸ್‌ಎಫ್ ಪಡೆಗಳು ಕೂಡಲೇ ಹಲವು ಸುತ್ತು ಗುಂಡು ಹಾರಿಸುವ ಮೂಲಕ ಡ್ರೋನ್ ಅನ್ನು ಹೊಡೆದುರುಳಿಸಿದ್ದಾರೆ. ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳು ಅಥವಾ ಮಾದಕ ವಸ್ತುಗಳನ್ನು ಸಾಗಾಟ ನಡೆಸಿರುವ ಬಗ್ಗೆ ರಾಮ್‌ಘರ್ ಸೆಕ್ಟರ್‌ನ ನಾರಾಯಣಪುರದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್–ಎ–ತಯಬಾ ಉಗ್ರ ಸಂಘಟನೆಯ ಘಟಕವಾದ ‘ಟಿಆರ್‌ಎಫ್’ನ ಕಮಾಂಡರ್ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದರು. ಇದರ ಬೆನ್ನಲ್ಲೇ ಗಡಿಯಲ್ಲಿ ಶಂಕಿತ ಚಟುಟಿಕೆಗಳು ವ್ಯಾಪಕವಾಗಿವೆ.