ನವದೆಹಲಿ: ಕಾಡ್ಗಿಚ್ಚು ನಿಯಂತ್ರಿಸಲು ವಿಫಲವಾದ ಉತ್ತರಾಖಂಡ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಕಾಡ್ಗಿಚ್ಚು ನಿಯಂತ್ರಿಸಲು ರಾಜ್ಯ ಸರ್ಕಾರ ಅನುಸರಿಸುತ್ತಿರುವ ಕ್ರಮವು "ಅಸಮರ್ಪಕ" ಎಂದು ಹೇಳಲು ನೋವಾಗುತ್ತಿದೆ ಎಂದು ಬುಧವಾರ ಹೇಳಿದೆ.
ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠವು ಉತ್ತರಾಖಂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ನೀಡದ್ದು, ಮೇ 17 ರಂದು ಖುದ್ದು ಹಾಜರಾಗುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎಸ್‌ವಿಎನ್ ಭಟ್ಟಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ, ಅನೇಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿದ್ದರೂ, ಅವುಗಳ ಅನುಷ್ಠಾನಕ್ಕೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದನ್ನು ಗಮನಿಸಿತು.
ರಾಜ್ಯದ ಅರಣ್ಯ ಇಲಾಖೆಯಲ್ಲಿ ಹೆಚ್ಚು ಹುದ್ದೆಗಳು ಖಾಲಿಯಿರುವ ಬಗ್ಗೆಯೂ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಹೇಳಿದೆ.
ದೇವಭೂಮಿ ಉತ್ತರಾಖಂಡದಲ್ಲಿ ಕಾಡುತ್ತಿರುವ ಕಾಡ್ಗಿಚ್ಚು ಕುರಿತ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಈ ತಿಂಗಳ ಆರಂಭದಲ್ಲಿ, ಉತ್ತರಾಖಂಡದ ನೈನಿತಾಲ್‌ನ ವಸತಿ ಪ್ರದೇಶಕ್ಕೆ ಕಾಡ್ಗಿಚ್ಚು ಅಪಾಯಕಾರಿಯಾಗಿ ತಲುಪಿತ್ತು. ಅಗ್ನಿಶಾಮಕ ಕಾರ್ಯಾಚರಣೆಗಾಗಿ ಬೋಟಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಮತ್ತು ಸೇನೆಯ ಸಿಬ್ಬಂದಿಯನ್ನು ಕಾರ್ಯಾಚರಣೆಗಾಗಿ ಕರೆ ತರಲಾಗಿತ್ತು. ನೈನಿತಾಲ್ ದೇಶದಾದ್ಯಂತ ಅತ್ಯಂತ ಪ್ರಸಿದ್ಧವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ನೈನಿ ಸರೋವರಕ್ಕೆ ಹೆಸರುವಾಸಿಯಾಗಿದೆ. ಉತ್ತರಾಖಂಡದ ಹಲವೆಡೆ ಕಾಡ್ಗಿಚ್ಚು ಇನ್ನೂ ಅಬ್ಬರಿಸಿದ್ದು, ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.