ಲಖನೌ: ಲೋಕಸಭಾ ಚುನಾವಣೆಯಲ್ಲಿ INDIA ಮೈತ್ರಿಕೂಟ ಸುಮಾರು 300 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ ಮತ್ತು ಎನ್‌ಡಿಎ 200 ಸ್ಥಾನಗಳನ್ನು ಮಾತ್ರ ಗಳಿಸಲಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿಕೆ ಶಿವಕುಮಾರ್, 'ಇಂಡಿಯಾ ಮೈತ್ರಿಕೂಟವು ಸುಮಾರು 300 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಎನ್‌ಡಿಎ 200 ರ ಆಸುಪಾಸಿನಲ್ಲಿರುತ್ತದೆ. ನಾವು ಸಾಮೂಹಿಕ ನಾಯಕತ್ವವನ್ನು ನಂಬುತ್ತೇವೆ... ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಮತ್ತು ಸರ್ಕಾರ ರಚಿಸಲು ಹಾಗೂ ಪ್ರಧಾನಿ ಆಯ್ಕೆಗೆ ಒಟ್ಟಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಹಿಂದೆಯೂ ಯುಪಿಎ ಅಧಿಕಾರಕ್ಕೆ ಬಂದಾಗ ಎಲ್ಲಾ ಸಂಸದರು ಸೋನಿಯಾ ಗಾಂಧಿ ದೇಶದ ಪ್ರಧಾನಿಯಾಗಬೇಕೆಂದು ಬಯಸಿದ್ದರು. ನಾವು ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರಿಗೂ ಪತ್ರ ನೀಡಿದ್ದೆವು. ಆದರೆ ಸೋನಿಯಾ ಗಾಂಧಿಯವರು, ದೇಶವನ್ನು ಉಳಿಸಲು ಒಬ್ಬ ಸಿಖ್ ವ್ಯಕ್ತಿ, ಅರ್ಥಶಾಸ್ತ್ರಜ್ಞ(ಡಾ. ಮನಮೋಹನ್ ಸಿಂಗ್)ರನ್ನು ಪ್ರಧಾನಿ ಮಾಡಿದರು ಎಂದರು.
ಇದೇ ವೇಳೆ ಭಾರತೀಯ ಜನತಾ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, ಕಪ್ಪುಹಣ, ರೈತರ ಆದಾಯ ಮತ್ತು ನಿರುದ್ಯೋಗಕ್ಕೆ ಬಿಜೆಪಿ ಹೊಣೆಗಾರರಾಗಬೇಕು ಎಂದು ಹೇಳಿದರು.
"ಬಿಜೆಪಿ ಈ ಬಗ್ಗೆ ಮೊದಲು ಭಾರತದ ಜನರಿಗೆ ಉತ್ತರಿಸಬೇಕಾಗಿದೆ: ತಾನು ಮರಳಿ ತರಬೇಕಾಗಿದ್ದ ಕಪ್ಪುಹಣ ಎಲ್ಲಿದೆ? ಬಿಜೆಪಿ ಭರವಸೆ ನೀಡಿದಂತೆ ರೈತರ ಆದಾಯವನ್ನು ಏಕೆ ದ್ವಿಗುಣಗೊಳಿಸಿಲ್ಲ? ನಮ್ಮ ಯುವಕರಿಗೆ ಭರವಸೆ ನೀಡಿದ 2 ಕೋಟಿ ಉದ್ಯೋಗಗಳು ಎಲ್ಲಿ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.