ಕೋಲ್ಕತ್ತಾ: ಬಿರುಗಾಳಿಯಿಂದಾಗಿ ಮರದಿಂದ ಕೆಳಗೆ ಬಿದ್ದಿದ್ದ ಮಾವಿನ ಹಣ್ಣುಗಳನ್ನು ಸಂಗ್ರಹಿಸಲು ತೋಟಕ್ಕೆ ತೆರಳಿದ್ದವರು ಸೇರಿದಂತೆ ಪಶ್ಚಿಮ ಬಂಗಾಳದ ಮಾಲ್ದಾದಲ್ಲಿ ಗುರುವಾರ ಸಿಡಿಲು ಬಡಿದು ಹನ್ನೊಂದು ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲಾಡಳಿತವು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
'ದುರಂತ ಘಟನೆಯಲ್ಲಿ ಸಿಡಿಲು ಬಡಿದು ಮಾಲ್ದಾದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾನಿದ್ದೇನೆ. ಈ ಕಷ್ಟದ ಸಮಯದಲ್ಲಿ ಅವರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಗಾಯಾಳುಗಳೊಂದಿಗೆ ಇವೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ಜಿಲ್ಲಾಡಳಿತವು ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ಒದಗಿಸಲು ಅವಿರತವಾಗಿ ಶ್ರಮಿಸುತ್ತಿದೆ. ಅಗತ್ಯವಿರುವವರಿಗೆ ನಾವು ಎಲ್ಲವನ್ನೂ ಮಾಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಚಂದನ್ ಸಹಾನಿ (40), ರಾಜ್ ಮೃದ್ಧಾ (16) ಮತ್ತು ಮನಜಿತ್ ಮಂಡಲ್ (21) ಅವರು ಸಹಾಪುರದ ತೋಟದಲ್ಲಿ ಮಾವು ಸಂಗ್ರಹಿಸುತ್ತಿದ್ದಾಗ ಸಾವಿಗೀಡಾಗಿದ್ದಾರೆ. ಅಸಿತ್ ಸಹಾ (19) ಕೂಡ ಮಾವಿನ ಹಣ್ಣುಗಳನ್ನು ಸಂಗ್ರಹಿಸುತ್ತಿದ್ದಾಗ ಸಿಡಿಲು ಬಡಿದು ಗಜೋಲ್‌ನಲ್ಲಿ ಸಾವಿಗೀಡಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹಾಗೆಯೇ ಅತುಲ್ ಮಂಡಲ್ (65), ಶೇಖ್ ಸಬ್ರುಲ್ (11) ಮತ್ತು ರಾಣಾ ಶೇಖ್ (11) ಅವರು ನಿಹಲುತೋಲಾ ಮಾವಿನ ತೋಟದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮಾಲ್ದಾವು 'ಫಜ್ಲಿ', 'ಹಿಂಸಾಗರ್' ಮತ್ತು 'ಲಕ್ಷ್ಮಣಭೋಗ್' ನಂತಹ ಹಲವಾರು ವಿಧದ ಮಾವಿನಹಣ್ಣುಗಳಿಗೆ ಹೆಸರುವಾಸಿಯಾಗಿದೆ.
ಮಾಲ್ದಾದ ರಟುವಾ ಮತ್ತು ಇಂಗ್ಲಿಷ್‌ಬಜಾರ್ ಪ್ರದೇಶದಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಿತ್ರಾ ಮೊಂಡೋಲ್ (45) ಮತ್ತು ಪಂಕಜ್ ಮೊಂಡೋಲ್ (23) ಸಿಡಿಲು ಬಡಿದು ಮೃತಪಟ್ಟಿದ್ದರೆ, ನಯನ್ ರೇ (23) ಮತ್ತು ಪ್ರಿಯಾಂಕಾ ಸಿಂಗ್ (20) ಸೆಣಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ.
ಸಹಾಪುರ ಮತ್ತು ಇಂಗ್ಲಿಷ್‌ಬಜಾರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಮಾಲ್ದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.