ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪದ ನಂತರ, ಎಎಪಿ 'ಸಂಸದೆಯ ಮುಖವಾಡ ಕಳಚುವ' ಪ್ರಯತ್ನದ ಭಾಗವಾಗಿ ಹೊಸ ಸಿಸಿಟಿವಿ ದೃಶ್ಯಾವಳಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಎಎಪಿ ಹಂಚಿಕೊಂಡ ತಾಜಾ ದೃಶ್ಯಗಳಲ್ಲಿ, ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಿಂದ ಹೊರನಡೆಯುತ್ತಿರುವಾಗಲೂ ತಮ್ಮನ್ನು ಮನೆಯಿಂದ ಹೊರಗೆ ಕರೆದೊಯ್ದ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದದಲ್ಲಿ ತೊಡಗಿರುವುದನ್ನು ಕಾಣಬಹುದು.
ಹೊಸ ವಿಡಿಯೋ ಕ್ಲಿಪ್ ಅನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಎಎಪಿ, "ಈ ವಿಡಿಯೋ ಸ್ವಾತಿ ಮಲಿವಾಲ್ ಅವರ ಆರೋಪದ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತದೆ" ಎಂದು ಹಿಂದಿಯಲ್ಲಿ ಬರೆದಿದೆ.
ಈ ನಡುವೆ ಕೇಜ್ರಿವಾಲ್ ನಿವಾಸದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಟ್ಯಾಂಪರ್ ಮಾಡಲಾಗುತ್ತಿದೆ ಎಂದು ಮಲಿವಾಲ್ ಆರೋಪಿಸಿದ್ದಾರೆ.
ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶನಿವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
ಮಲಿವಾಲ್ ಅವರನ್ನು "ಬಿಜೆಪಿ ಏಜೆಂಟ್" ಎಂದು ಬಿಂಬಿಸುತ್ತಿರುವ ಬಿಭವ್ ಕುಮಾರ್ ಅವರೊಂದಿಗೆ ನಿಲ್ಲಲು ಎಎಪಿ ನಿರ್ಧರಿಸಿದೆ.