ಪುಣೆ: ಪುಣೆಯಲ್ಲಿ ಐಷಾರಾಮಿ ಕಾರು ಪೋರ್ಷೆ ಚಲಾಯಿಸಿ ಇಬ್ಬರನ್ನು ಬಲಿ ಪಡೆದ 17 ವರ್ಷದ ಬಾಲಕನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಬಾಲಾಪರಾಧಿಗೆ ಮದ್ಯ ನೀಡಿದ್ದಕ್ಕಾಗಿ ಎರಡು ಹೋಟೆಲ್‌ಗಳ ಮೂವರು ಸಿಬ್ಬಂದಿಯನ್ನು ಸಹ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಇಲ್ಲಿನ ಕಲ್ಯಾಣಿನಗರ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಬಾರ್‌ನಲ್ಲಿ ಮದ್ಯ ಸೇವಿಸಿ ಪಾನಮತ್ತರಾಗಿದ್ದ 17 ವರ್ಷದ ಬಾಲಕ ಚಾಲನೆ ಮಾಡುತ್ತಿದ್ದ ಪೋರ್ಷೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
"ನಾವು ಛತ್ರಪತಿ ಸಂಭಾಜಿನಗರದಲ್ಲಿ ಅಪ್ರಾಪ್ತ ಮಗನಿಗೆ ಕಾರು ಕೊಟ್ಟ ತಂದೆಯನ್ನು ಬಂಧಿಸಿದ್ದೇವೆ ಮತ್ತು ಅವರನ್ನು ಪುಣೆಗೆ ಕರೆತರಲಾಗುತ್ತಿದೆ ಮತ್ತು ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ" ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಇದಲ್ಲದೆ, ಪುಣೆ ಪೊಲೀಸರು ಕೋಸಿ ರೆಸ್ಟೋರೆಂಟ್ ಮಾಲೀಕ ಪ್ರಹ್ಲಾದ್ ಭುಟ್ಡಾ ಮತ್ತು ಮ್ಯಾನೇಜರ್ ಸಚಿನ್ ಕಾಟ್ಕರ್ ಮತ್ತು ಹೋಟೆಲ್ ಬ್ಲಾಕ್ ಮ್ಯಾನೇಜರ್ ಸಂದೀಪ್ ಸಾಂಗ್ಲೆ ಅವರನ್ನು ಅಪ್ರಾಪ್ತನಿಗೆ ಮದ್ಯ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಶೈಲೇಶ್ ಬಾಲ್ಕವಾಡೆ ಅವರು ಹೇಳಿದ್ದಾರೆ.
ನಂತರ ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
"ಬಾರ್‌ನ ಸಿಸಿಟಿವಿ ದೃಶ್ಯಾವಳಿಗಳು ಬಾಲಾಪರಾಧಿ ಮದ್ಯ ಸೇವಿಸಿರುವುದು ಸ್ಪಷ್ಟವಾಗಿ ತೋರಿಸುತ್ತಿದೆ. ಬಾಲಾಪರಾಧಿ ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಎಲ್ಲಾ ಸಂಗತಿಗಳನ್ನು ನಾವು ನ್ಯಾಯಾಲಯಕ್ಕೆ ತಿಳಿಸುತ್ತೇವೆ" ಎಂದು ಪೊಲೀಸ್ ಕಮಿಷನರ್ ಕುಮಾರ್ ಈ ಹಿಂದೆ ಹೇಳಿದ್ದರು.