ಬಿಕ್ರಮ್(ಬಿಹಾರ): ಇಂಡಿಯಾ ಬ್ಲಾಕ್ ಮುಸ್ಲಿಂ ಮತಬ್ಯಾಂಕ್‌ಗಾಗಿ ಗುಲಾಮಗಿರಿ ಮತ್ತು “ಮುಜ್ರಾ”(ನೃತ್ಯ) ಬೇಕಾದರೂ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪ್ರತಿಪಕ್ಷಗಳ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಬಿಹಾರದ ಪಾಟ್ನಾದಿಂದ ಸುಮಾರು 40 ಕಿಮೀ ದೂರದಲ್ಲಿರುವ ಪಾಟಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳು "ಮೀಸಲಾತಿಯಿಂದ ವಂಚಿತರಾಗಲು" ಆರ್‌ಜೆಡಿ ಮತ್ತು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು. ಅಲ್ಲದೆ ದಲಿತರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ದೋಚುವ ಇಂಡಿಯಾ ಮೈತ್ರಿಕೂಟದ ಪ್ರಯತ್ನಗಳನ್ನು ತಡೆಯುವುದಾಗಿ ಹೇಳಿದರು.
"ಸಾಮಾಜಿಕ ನ್ಯಾಯದ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿದ ಭೂಮಿ ಬಿಹಾರ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ಮತ್ತು ಅವುಗಳನ್ನು ಮುಸ್ಲಿಮರಿಗೆ ನೀಡುವ ಇಂಡಿಯಾ ಬಣದ ಯೋಜನೆಯನ್ನು ನಾನು ವಿಫಲಗೊಳಿಸುತ್ತೇನೆ ಎಂದ ಪ್ರಧಾನಿ ಮೋದಿ, ಅವರು ತಮ್ಮ ಮತ ಬ್ಯಾಂಕ್ ಅನ್ನು ಮೆಚ್ಚಿಸಲು 'ಮುಜ್ರಾ' ಮಾಡಬಹುದು" ಎಂದು ಟೀಕಿಸಿದರು.
“ನಾನು ಬಿಹಾರ, ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯಗಳಿಗೆ ಭರವಸೆ ನೀಡುತ್ತಿದ್ದೇನೆ. ಮೋದಿ ಬದುಕಿರುವವರೆಗೆ ಅವರ ಹಕ್ಕುಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ, ಮೋದಿಗೆ ಸಂವಿಧಾನ ಸರ್ವಶ್ರೇಷ್ಠ, ಮೋದಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವನೆಗಳು ಸರ್ವೋಚ್ಚ. ಇಂಡಿಯಾ ಬಣವು ತಮ್ಮ ಮತ ಬ್ಯಾಂಕ್‌ನ ಜೀತಪದ್ಧತಿಯನ್ನು ಸ್ವೀಕರಿಸಲು ಬಯಸುತ್ತದೆ ಎಂದರು.
ತಮ್ಮ ವೋಟ್ ಬ್ಯಾಂಕ್ ಅನ್ನು ಸಂತೋಷಪಡಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನನ್ನು ಬದಲಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.