ನವದೆಹಲಿ: ಪೂರ್ವ ದೆಹಲಿಯ ಆಸ್ಪತ್ರೆಯೊಂದರ ಹೊರಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಏಳು ನವಜಾತ ಶಿಶುಗಳು ಬಲಿಯಾಗಿವೆ. ಈ ಮಧ್ಯೆ ಅಗ್ನಿ ಜ್ವಾಲೆ ನಡುವೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ಥಳೀಯರು ಶಿಶುಗಳನ್ನು ರಕ್ಷಿಸಿದ್ದರ ಪರಿಣಾಮ ಸಾವಿನ ಸಂಖ್ಯೆ ಕಡಿಮೆಯಾಗಿದೆ.
ಕಳೆದ ರಾತ್ರಿ 11:30ರ ಸುಮಾರಿಗೆ ವಿವೇಕ್ ವಿಹಾರ್ ಪ್ರದೇಶದ ಬೇಬಿ ಕೇರ್ ನ್ಯೂ ಬಾರ್ನ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ಪಕ್ಕದ ಎರಡು ಕಟ್ಟಡಗಳಿಗೆ ವ್ಯಾಪಿಸಿತ್ತು. ಹನ್ನೆರಡು ನವಜಾತ ಶಿಶುಗಳನ್ನು ರಕ್ಷಿಸಲಾಗಿತ್ತು. ಆದರೆ ಆ ಪೈಕಿ ಏಳು ಶಿಶುಗಳು ಸಾವನ್ನಪ್ಪಿದ್ದು ಐದು ಶಿಶುಗಳನ್ನು ಪೂರ್ವ ದೆಹಲಿಯ ಅಡ್ವಾನ್ಸ್ಡ್ ಎನ್ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಟಿಬಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯ ಹಿಂದಿನ ಕಿಟಕಿಯಿಂದ ಸ್ಥಳೀಯರ ಸಹಾಯದಿಂದ ಶಿಶುಗಳನ್ನು ಕಟ್ಟಡದಿಂದ ಹೊರಗೆ ತರಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಬಗ್ಗೆ ಸ್ಥಳೀಯ ನಿವಾಸಿ ಜಿತೇಂದರ್ ಸಿಂಗ್ ವಿವರಿಸಿದ್ದು, ನಾನು ರಾತ್ರಿ 11:25ರ ಸುಮಾರಿಗೆ ಘಟನಾ ಸ್ಥಳಕ್ಕೆ ಬಂದೆ. ನಾನು ಬಂದ ನಂತರ ಮೂರು ಸಿಲಿಂಡರ್ ಗಳು ಸ್ಫೋಟಗೊಂಡವು. ಸಿಲಿಂಡರ್ ಸ್ಫೋಟದಿಂದ ಇಡೀ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತು.
ಆಸ್ಪತ್ರೆಯ ಕಟ್ಟಡದ ಮುಂಭಾಗ ಬೆಂಕಿ ಹೊತ್ತಿ ಉರಿಯುತ್ತಿತ್ತು. ಹೀಗಾಗಿ ಹಿಂಬದಿಯ ಕಿಟಕಿಗಳನ್ನು ಒಡೆದು ಒಳ ನುಗ್ಗಿ ಮಕ್ಕಳನ್ನು ರಕ್ಷಿಸಿದೆವು ಎಂದು ಸಿಂಗ್ ಹೇಳಿದರು. ಹೊಗೆ ಮತ್ತು ಬಳಲಿಕೆಯಿಂದಾಗಿ ಶಿಶುಗಳು ಮೂರ್ಛೆ ಹೋಗಿದ್ದವು. ಕೂಡಲೇ ಶಿಶುಗಳನ್ನು ಮತ್ತೊಂದು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅದರಲ್ಲಿ ಏಳು ಮಕ್ಕಳು ಸಾವನ್ನಪ್ಪಿವೆ. ಒಂದು ಶಿಶುವಿನ ಸಾವು ಸಹಜವಾಗಿದ್ದು ರಾತ್ರಿ 8 ಗಂಟೆಗೆ ನಡೆದಿತ್ತು. ಆರು ಶಿಶುಗಳು ಬೆಂಕಿಯಿಂದಾಗಿ ಮೃತಪಟ್ಟಿದೆ. ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಮತ್ತು ನಾಲ್ವರಿಗೆ ಸಣ್ಣ ಸುಟ್ಟಗಾಯಗಳಿವೆ ಎಂದು ಜಿತೇಂದರ್ ಹೇಳಿದರು.
ಏಳು ಶಿಶುಗಳ ಸಾವು 'ಹೃದಯ ವಿದ್ರಾವಕ': ಪ್ರಧಾನಿ ಮೋದಿ
ದೆಹಲಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತವು 'ಹೃದಯ ವಿದ್ರಾವಕ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇನ್ನು ದುರಂತದಲ್ಲಿ ಮೃತಪಟ್ಟಿರುವ ಶಿಶುಗಳ ಪೋಷಕರಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ.